ಅಥಣಿ:ಪ್ರತಿ ವರ್ಷ ಕೃಷಿಯಲ್ಲಿ ಬೆಳೆದ ಒಂದು ಭಾಗವನ್ನು ಬಡ ಕುಟುಂಬಗಳಿಗೆ ದಾನ ಮಾಡುವ ಮೂಲಕ ಅಥಣಿಯಲ್ಲಿ ಓರ್ವ ರೈತ ಆಧುನಿಕ ಕರ್ಣ ಎಂದು ಖ್ಯಾತಿ ಹೊಂದಿದ್ದಾರೆ.
ಹೀಗೆ ಸಾಲುಗಟ್ಟಿ ನಿಂತಿರುವ ಮಹಿಳೆಯರು, ಆನಂದದಿಂದ ಓಡಾಡುತ್ತಿರುವ ಮಕ್ಕಳು.. ಇದಕ್ಕೆಲ್ಲ ಸಾಕ್ಷಿ ಎಂಬಂತೆ ಕುಳಿತಿರುವ ಊರಿನ ಗಣ್ಯರು. ಇವೆಲ್ಲ ದೃಶ್ಯಾವಳಿಗಳು ಕಂಡು ಬಂದಿರುವುದು ತಾನು ಬೆಳೆದ ಬೆಳೆಯ ಮಾರಾಟವಾದ ಹಣದ ನಾಲ್ಕರಲ್ಲಿ ಒಂದರಷ್ಟು ಬಡವರಿಗೆ ಮೀಸಲಾಗಿಟ್ಟಿರುವ ಓರ್ವ ರೈತ ಕುಟುಂಬದ ಕಾರ್ಯಕ್ರಮದಲ್ಲಿ.
20 ವರ್ಷಗಳಿಂದ ಬಡವರಿಗೆ ದಾನ: ಆಧುನಿಕ ಕರ್ಣ ಎನಿಸಿಕೊಂಡ ಅಥಣಿಯ ರೈತ ಹೌದು, ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ರೈತ ಮಹಾವೀರ ಪಡನಾಡ ಅವರ ತಂದೆ ದಿ.ಬಾಬುರಾವ್ ಪಡನಾಡ ಸ್ಮರಣಾರ್ಥವಾಗಿ ಕಳೆದ 20 ವರ್ಷಗಳಿಂದ ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭ ಗ್ರಾಮದ ಹಾಗೂ ತಾಲೂಕಿನ ಮತ್ತು ಪಕ್ಕದ ಮಹಾರಾಷ್ಟ್ರ ರಾಜ್ಯದ ಬಡ ಜನರಿಗೆ ಬಂಗಾರ, ಬೆಳ್ಳಿ, ಪಾತ್ರೆ, ದವಸ - ಧಾನ್ಯ, ವಸ್ತ್ರ, ಮತ್ತು ಶಾಲೆ ಮಕ್ಕಳಿಗೆ ನೋಟ್ ಬುಕ್, ಪೆನ್ನು, ಬ್ಯಾಗ್ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಣ ಸಹಾಯ ಮಾಡುತ್ತಿದ್ದಾರೆ. ಪ್ರತಿ ವರ್ಷ 10 ಲಕ್ಷ ರೂ. ಅಧಿಕ ಹಣ ಬಡವರಿಗೆ ಮೀಸಲಾಗಿಟ್ಟು ತಾಲೂಕಿನಲ್ಲಿ ದಾನಶೂರ ಕರ್ಣ ಎಂದೇ ಖ್ಯಾತಿ ಹೊಂದಿದ್ದಾರೆ.
ಯಾವುದೇ ಪ್ರಚಾರ ಬಯಸಿದರೆ ಹಾಗೂ ಅವರಿಂದ ಮುಂದೆ ಸಹಾಯ ನಿರೀಕ್ಷೆ ಮಾಡದೇ ಮಹಾಭಾರತದ ಕರ್ಣನ ರೀತಿ ಅಥಣಿ ತಾಲೂಕಿನ ಆಧುನಿಕ ಕರ್ಣ ಮಹಾವೀರ ಪಡನಾಡ ಸಮಾಜಕ್ಕೆ ತಾನು ದುಡಿದಿದ್ದರಲ್ಲಿ ಒಂದು ಪಾಲು ಬಡವರಿಗೆ ಹಂಚುತ್ತಿರುವುದು ಸಮಾಜಕ್ಕೆ ಉತ್ತಮ ಸಂದೇಶ. ಪಡನಾಡ ಕುಟುಂಬಕ್ಕೆ ಆ ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.