ಅಥಣಿ ಕ್ಷೇತ್ರದಲ್ಲಿ ಸಮಸ್ಯೆಗಳಿಗೆ ಮುಕ್ತಿ ನೀಡಲಿ ಎಂದು ಜನರು ಆಗ್ರಹ. ಬೆಳಗಾವಿ :ದಿನದಿಂದ ದಿನಕ್ಕೆ ಅಥಣಿ ಕ್ಷೇತ್ರದಲ್ಲಿ ವಿಧಾನಸಭಾ ಚುಣಾವಣೆ ಕಾವು ಏರುತ್ತಿದೆ. ಕಣದಲ್ಲಿ ಈಗಾಗಲೇ ಘಟಾನುಘಟಿ ನಾಯಕರು ಇರುವುದರಿಂದ ರಾಜ್ಯದಲ್ಲಿ ಅಥಣಿ ಪವರ್ ಪಾಯಿಂಟ್ ಆಗಿದ್ದು ರಾಜ್ಯದ ಗಮನವನ್ನು ಈ ಕ್ಷೇತ್ರ ಸೆಳೆಯುತ್ತಿದೆ. ಆದರೆ, ಅಥಣಿಯಲ್ಲಿ ಇನ್ನು ಸಮಸ್ಯೆಗಳು ತಾಂಡವ ಆಡುತ್ತಿದ್ದು, ಬರುವ ಸರ್ಕಾರ ಹಾಗೂ ನೂತನ ಶಾಸಕರು ನಮ್ಮ ಸಮಸ್ಯೆಗಳಿಗೆ ಮುಕ್ತಿ ನೀಡಲಿ ಎಂದು ಜನರು ಆಗ್ರಹಿಸುತ್ತಿದ್ದಾರೆ.
ಇನ್ನು ಅಥಣಿಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ಸ್ಥಳೀಯರನ್ನು ಕೇಳಿದಾಗ ಪೂರ್ವ ಹಾಗೂ ಉತ್ತರ ಭಾಗದಲ್ಲಿ ನೀರಾವರಿ ಯೋಜನೆಗಳನ್ನು ನೀಡುವಲ್ಲಿ ಹಲವು ಸರ್ಕಾರಗಳು ವಿಫಲವಾಗಿದೆ. ಹೀಗಾಗಿ ಅಲ್ಲಿನ ಪ್ರದೇಶಗಳು ಬರಪೀಡಿತವಾಗಿದ್ದು, ಜನರು ವಲಸೆ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬರುವಂತಹ ಸರ್ಕಾರಗಳು ಯಾವುದೇ ಇರಲಿ ನೀರಾವರಿ ಯೋಜನೆಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರಾದ ಜಕ್ಕಣ್ಣ ಬೇವನೂರ ಆಗ್ರಹಿಸಿದರು.
ಅಥಣಿ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಮಂಜೂರಾತಿ ಹಾಗೂ ಒಳಚರಂಡಿ, ರಸ್ತೆ ಆಗಬೇಕು. ಹಾಗು ಮುಖ್ಯವಾಗಿ ರೈತರಿಗೆ ನೀರಾವರಿ ಕಲ್ಪಿಸಬೇಕು ಏಕೆಂದರೇ ಒಂದು ವರ್ಷದಿಂದ ಬೆಳೆದ ಬೆಳೆಗಳು ನೀರಿಲ್ಲದೆ ಈ ಬೀಸಿಗೆಯಲ್ಲಿ ಒಣಗಿ ಹೋಗಿವೆ. ನದಿಯಲ್ಲೂ ಸಹಾ ಹೆಚ್ಚಿನ ನೀರಿಲ್ಲ. ರೈತರಿಗೆ ಅನುಕೂಲವಾಗುವಂತೆ ಕೈಗಾರಿಕೆಗಳು ಬರಬೇಕು. ತಾಲೂಕಿನ ಹಲವು ಸಮಸ್ಯೆಗಳನ್ನು ಆದಷ್ಟು ಬೇಗನೆ ಮುಕ್ತಿ ನೀಡಬೇಕು. ಆದರೇ ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಚುನಾವಣೆಯಿಂದಾಗಿ ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿಕೊಂಡಿವೆ. ರೈತರ ಬಗ್ಗೆ ಕೂಡ ಸ್ವಲ್ಪ ಗಮನ ಹರಿಸಿ ಎಂದು ಸ್ಥಳೀಯರಾದ ಮಹಾವೀರ ನಂದೀಶ್ವರ ಮನವಿ ಮಾಡಿದರು.
ಕ್ಷೇತ್ರದಲ್ಲಿ ಬಡತನದಿಂದ ಬಳಲುತ್ತಿರುವ ಜನರಿಗೆ ಆಶ್ರಯ ಮನೆಗಳನ್ನು ನೀಡುವಂತೆ ಮತ್ತು ಈ ಭಾಗದಲ್ಲಿ ಬಹುದಿನಗಳ ಬೇಡಿಕಾಗಿರುವ ಶೇಡಬಾಳ ವಿಜಯಪೂರ ರೈಲು ಮಾರ್ಗ ಯೋಜನೆ ರೂಪಿಸುವಂತೆ ಆಗ್ರಹಿಸುದ್ದೇವೆ. ಈ ಇದರ ಪರಿಣಾಮ ಈಗಾಗಲೇ ಮಹೇಶ್ ಕುಮಟಳ್ಳಿ ಸಾಕಷ್ಟು ಹಣವನ್ನು ಕ್ಷೇತ್ರದ ಅಭಿಬವೃದ್ದಿಗೆ ತಂದಿದ್ದು, ಇನ್ನುಳಿದಂತೆ ಕೆರೆಗಳ ಅಭಿವೃದ್ದಿ ಆಗಬೇಕಾಗಿದೆ ಎಂದು ಅಶೋಕ್ ಗೌರಗೊಂಡ ಎಂಬುವರು ತಮ್ಮ ತಾಲೂಕಿ ಸಮಸ್ಯೆಗಳನ್ನು ತಿಳಿಸಿದರು.
ಪ್ರತಿ ವರ್ಷ ಮಳೆಗಾಲದಲ್ಲಿ ಅಥಣಿಯಲ್ಲಿ ಕೃಷ್ಣಾ ನದಿ ಪ್ರವಾಹದಿಂದಾಗಿ 17 ಹಳ್ಳಿಗಳು ಸಿಲುಕಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಬಳಿಕ ಪ್ರವಾಹಕ್ಕೆ ಸಿಲುಕುವ ಹಳ್ಳಿಗಳ ಸ್ಥಳಾಂತರಕ್ಕೆ ಜನರು ಬೇಡಿಕೆ ಇಟ್ಟಿದ್ದಾರೆ. ಇದುವರೆಗೂ ಪುನರ್ವಸತಿ ಇಲ್ಲದೇ ಇರುವುದರಿಂದ ನೇರೆ ಸಂತ್ರಸ್ತರಿಗೆ ಪ್ರತಿ ವರ್ಷ ಕೃಷ್ಣಾ ನದಿ ಪ್ರವಾಹ ಬಂದಾಗ ಸಂಕಷ್ಟಕ್ಕೆ ದೂಡುತ್ತಿದೆ. ಹಾಗೂ ತಾಲೂಕಿನಲ್ಲಿ ಪೊಲೀಸ್ ಠಾಣೆ ನಿರ್ಮಾಣ ಆಗಬೇಕು ಎಂದು ಎ.ಬಿ ಹಳ್ಳೂರ ಎಂಬ ಸ್ಥಳೀಯರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಥಣಿ ಮತಕ್ಷೇತ್ರದಲ್ಲಿ ಒಟ್ಟು 223088 ಮತದಾರರು ಹೊಂದಿದ್ದು, ಇದರಲ್ಲಿ 114201 ಗಂಡು ಮತದಾರರು ಹಾಗೂ 108881 ಹೆಣ್ಣು ಮತದಾರರ ಹೊಂದಿದ್ದು ಇತರೆ 6 ಜನ ಮತದಾರರು ಈ ಬಾರಿ ಮತ ಹಕ್ಕನ್ನು ಪಡೆದುಕೊಂಡಿದ್ದಾರೆ. ಅಥಣಿಯಲ್ಲಿ ಪ್ರಬಲವಾಗಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ರೋಚಕವಾಗಿ ಸ್ಪರ್ಧೆ ಏರ್ಪಟ್ಟಿದ್ದು ಚುನಾವಣೆ ಕಣ ಬಿರುಸಿನಿಂದ ಸಿದ್ಧಗೊಂಡಿರುತ್ತದೆ. ಕಳೆದ ಇಪ್ಪತ್ತು ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಅಥಣಿ 2018 ರಲ್ಲಿ ಕಾಂಗ್ರೆಸ್, ಬಿಜೆಪಿ ಭದ್ರಕೋಟೆ ಒಡೆದು ಕೇವಲ ಒಂದು ವರ್ಷ ಮಾತ್ರ ಆಡಳಿತ ನಡೆಸಿರುವುದು ಇತಿಹಾಸ.
2004 ರಿಂದ 2018ರವರೆಗೆ ಸತತವಾಗಿ ಮೂರು ಅವಧಿಯಂತೆ 15 ವರ್ಷಗಳ ಕಾಲ ಸುದೀರ್ಘವಾಗಿ ಲಕ್ಷ್ಮಣ್ ಸವದಿ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿ ಆಡಳಿತ ನಡೆಸಿದ್ದು, ಇಲ್ಲಿ ಗಮನಾರ್ಹ ವಿಷಯ. ಕಳೆದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ಕುಮಟಳ್ಳಿ ವಿರುದ್ಧ ಲಕ್ಷ್ಮಣ್ ಸವದಿ 2,331 ಮತಗಳಿಂದ ಸೋತು ಕಾಂಗ್ರೆಸ್ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ಆಡಳಿತ ಚುಕ್ಕಾಣಿಯನ್ನು ಹಿಡಿದಿತ್ತು. ಆದರೆ, ರಾಜಕೀಯ ಬದಲಾವಣೆಯಿಂದ ಮಹೇಶ್ ಕುಮಟಳ್ಳಿ 2019 ರಲ್ಲಿ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷವನ್ನು ಸೇರಿಕೊಂಡು 2019 ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾದ ಮಹೇಶ್ ಕುಮಟಳ್ಳಿ 39989 ಮತಗಳ ಅಂತರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.
ಮಹೇಶ್ ಕುಮಟಳ್ಳಿ ಆಯ್ಕೆ ನಂತರ ಮತ್ತೆ ಬಿಜೆಪಿ ತನ್ನ ಭದ್ರಕೋಟೆಯನ್ನು ಬಲಪಡಿಸಿಕೊಂಡು ಈಗ 2023ರ ಸಾರ್ವತ್ರಿಕ ಚುನಾವಣೆಗೆ ಮುಂದಾಗಿದ್ದು, ಈ ಬಾರಿ ಕಾಂಗ್ರೆಸ್ ನಿಂದ ಲಕ್ಷ್ಮಣ್ ಸವದಿ ಬಿಜೆಪಿಯಿಂದ ಮಹೇಶ್ ಕುಮಠಳ್ಳಿ ಜೆಡಿಎಸ್ ಪಕ್ಷದಿಂದ ಶಶಿಕಾಂತ ಪಡಸಲಗಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಸವರಾಜ್ ಬಿಸನಕೊಪ್ಪ ಹಾಗೂ ಆಮ್ ಆದ್ಮಿ ಪಕ್ಷದಿಂದ ಸಂಪತ ಕುಮಾರ್ ಶೆಟ್ಟಿ, ಸೇರಿ ಒಟ್ಟು 13 ಜನ ಅಭ್ಯರ್ಥಿಗಳು ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ :ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಿಚ್ಚ ಸುದೀಪ್ ಭರ್ಜರಿ ಮತ ಬೇಟೆ