ಅಥಣಿ (ಬೆಳಗಾವಿ): ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ವಕ್ಷೇತ್ರದಲ್ಲಿ ಕೊರೊನಾ ಸೋಂಕಿತರಿಗೆ ಸರಿಯಾದ ಮೂಲಭೂತ ಸೌಕರ್ಯಗಳು ಲಭ್ಯವಾಗಿಲ್ಲ. ಅಥಣಿಯ ಕೋವಿಡ್-19 ಆಸ್ಪತ್ರೆಯಲ್ಲಿ ಸೋಂಕಿತರು ಪರದಾಡುತ್ತಿದ್ದು, ಅಲ್ಲಿನ ಅವ್ಯವಸ್ಥೆಯ ಬಗ್ಗೆ ವಿಡಿಯೋ ಮಾಡಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಅಥಣಿ ತಾಲೂಕಿನಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಬೆಳಗಾವಿ ಕೋವಿಡ್ ಆಸ್ಪತ್ರೆ ದೂರವಾಗುವುದರಿಂದ ಅಥಣಿಯ ಹೊರವಲಯದಲ್ಲಿ ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ 30 ಹಾಸಿಗೆ ಒಳಗೊಂಡ ಆಸ್ಪತ್ರೆ ನಿರ್ಮಾಣ ಮಾಡಿ, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಅಥಣಿ ಕೋವಿಡ್ ಆಸ್ಪತ್ರೆಯಲ್ಲಿಲ್ಲ ಮೂಲಸೌಕರ್ಯ ಕಳೆದ ಎಂಟು ದಿನಗಳಿಂದ ನಾವು ಇಲ್ಲಿ ವಾಸ ಮಾಡುತ್ತಿದ್ದೇವೆ. ನಮಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ, ಹಾಗೂ ಮೂಲಭೂತ ಸೌಲಭ್ಯವಿಲ್ಲ. ಕುಡಿಯೋಕೆ ನೀರು ಹಾಗೂ ಸರಿಯಾಗಿ ಊಟದ ವ್ಯವಸ್ಥೆಯಿಲ್ಲ. ಊಟ ಮದ್ಯಾಹ್ನ ಮೂರು ಘಂಟೆಗೆ ಬರುತ್ತೆ. ಇದರಿಂದ ಸಕ್ಕರೆ ಕಾಯಿಲೆ ಇರುವ ರೋಗಿಗಳಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ಅಲ್ಲಿನ ಸೋಂಕಿತರು ದೂರಿದ್ದಾರೆ.
ಆಸ್ಪತ್ರೆಯಲ್ಲಿ ಶೌಚಾಲಯ ಒಂದೇ ಇರುವುದರಿಂದ ತುಂಬಾ ತೊಂದರೆ ಆಗಿದೆ. ಗಂಟಲು ದ್ರವದ ವರದಿ ಕನಿಷ್ಠ ಎಂಟು ದಿನಕ್ಕೆ ಬರುತ್ತದೆ. ಆಸ್ಪತ್ರೆ ಒಳಗೆ ಹೊರಗೆ ಸ್ವಚ್ಛತೆ ಇಲ್ಲ, ಯಾವ ಅಧಿಕಾರಿ ಸೌಜನ್ಯಕ್ಕೂ ನಮ್ಮನ್ನು ಮಾತನಾಡಿಸಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ.