ಅಥಣಿ: ತಾಲೂಕಿನಲ್ಲಿ ಹಾಗು ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆ ಪರಿಣಾಮ ತೇಲಸಂಗ ಗ್ರಾಮದ ತೋಟದಲ್ಲಿ ವಾಸವಾಗಿರುವ ಜನರು ಡೋಣಿ ಹಳ್ಳ ದಾಟಲು ಹಗ್ಗದ ಸಹಾಯ ಬಳಸಿ ಹರಸಾಹಸ ಪಡುತ್ತಿದ್ದಾರೆ. ಈ ಘಟನೆ ರಾಜ್ಯಾದ್ಯಂತ ಸಂಚಲನವನ್ನುಂಟು ಮಾಡಿರುವ ಬೆನ್ನಲ್ಲೇ, ಅಥಣಿ ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಅಥಣಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿಯ ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋಲನುಭವಿಸಿದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ, ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ್ ಶಿಂಗೆ ಮತ್ತು ಕೆಲ ಕಾಂಗ್ರೆಸ್ ಮುಖಂಡರು ಅಪಾಯದ ಸ್ಥಳ ಡೋಣಿ ಹಳ್ಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ತಿಳಿದುಕೊಂಡರು. ಬಳಿಕ ಸ್ಥಳೀಯರಿಗೆ ನೀರಿನ ಪ್ರಮಾಣ ಕಡಿಮೆ ಆಗುವವರೆಗೆ ರಸ್ತೆ ದಾಟದಂತೆ ಮನವಿ ಮಾಡಿದರು.
ಇದೇ ವೇಳೆ ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ್ ಶಿಂಗೆ ಮಾತನಾಡಿ, ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತೆಲಸಂಗ-ಬಿಜ್ಜರಗಿ ರಸ್ತೆಯ ಡೋಣಿ ಹಳ್ಳ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಪರಿಣಾಮ ಜನರು ಪ್ರಾಣ ಪಣಕ್ಕಿಟ್ಟು ಹಗ್ಗದ ಸಹಾಯದಿಂದ ರಸ್ತೆ ದಾಟುತ್ತಿದ್ದಾರೆ. ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಶಾಸಕ ಮಹೇಶ ಕುಮಟಳ್ಳಿ ಆರು ತಿಂಗಳ ಹಿಂದೆ ಕಾಮಗಾರಿ ಪೂಜೆ ನೆರವೇರಿಸಿ ಹಲವು ತಿಂಗಳು ಕಳೆದರೂ ಕೂಡ ಕೆಲಸ ಕಾರ್ಯರೂಪಕ್ಕೆ ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದರೆ ರಸ್ತೆ ನಿರ್ಮಾಣಕ್ಕೆ ಇನ್ನೂ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಫೈನಾನ್ಸ್ ಅಪ್ರೂವಲ್ಗೆ ಕಳಿಸಲಾಗಿದೆ ಎಂದು ಹೇಳುತ್ತಿದ್ದಾರೆ.
ಹಾಗಾದರೆ ಫೈನಾನ್ಸಿಯಲ್ ಅಪ್ರೂವಲ್ ಆಗದೆ, ಟೆಂಡರ್ ಕರೆಯದೆ, ವರ್ಕ್ ಆರ್ಡರ್ ಕೊಡದೆ ಶಾಸಕರು ಕೇವಲ ಪ್ರಚಾರಕ್ಕಾಗಿ ಭೂಮಿ ಪೂಜೆ ನೆರವೇರಿಸಿದ್ದರಾ ಎಂದು ಸ್ಥಳೀಯ ಶಾಸಕರಿಗೆ ಪ್ರಶ್ನೆ ಮಾಡಿದ್ದಾರೆ. ಶಾಸಕರ ಸ್ವಗ್ರಾಮದಲ್ಲೇ ಪರಿಸ್ಥಿತಿ ಈ ರೀತಿ ಇದೆ, ಇನ್ನೂ ಅಥಣಿ ಕ್ಷೇತ್ರದ ಸ್ಥಿತಿ ಹೇಗಿರಬೇಡ ಎಂದು ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.