ಅಥಣಿ (ಬೆಳಗಾವಿ): ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಕೊರೊನಾ ಭ್ರಷ್ಟಾಚಾರ, ನೆರೆ ಪರಿಸ್ಥಿತಿ ಹಾಗೂ ಕಳೆದ ಬಾರಿ ಪರಿಹಾರ ವೈಫಲ್ಯ ಖಂಡಿಸಿ ಸರ್ಕಾರ ವಿರುದ್ಧ ಅಥಣಿ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರ ವಿರುದ್ಧ ಘೋಷಣೆ ಕೂಗಿ, ಜನಧ್ವನಿ ಎಂಬ ಕಾರ್ಯಕ್ರಮದಡಿ ಧರಣಿ ನಡೆಸಿದರು. ಅಥಣಿ ತಹಶೀಲ್ದಾರ್ ಕಚೇರಿ ಎದುರು ಗಿಡ ನೆಡುವ ಮೂಲಕ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನಾಚರಣೆ ಆಚರಿಸಿದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಂತರ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮೂಲಕ ರಾಜ್ಯಪಾಲರಿಗೆ ಇತ್ತೀಚಿಗೆ ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಜನವಿರೋಧಿ ಕಾಯ್ದೆಗಳನ್ನು ರದ್ದು ಮಾಡುವಂತೆ ಮನವಿ ಪತ್ರ ಸಲ್ಲಿಸಿದರು.
ಇದೆ ವೇಳೆ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿರುವ ಜೊತೆಗೆ ಹಲವಾರು ಜನವಿರೋಧಿ ಕಾಯ್ದೆ ತಿದ್ದುಪಡಿ ತಂದು ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅದರ ಜೊತೆಗೆ ಕೊರೊನಾ ಮಹಾಮಾರಿಗೆ ಜನರು ತತ್ತರಿಸಿದ್ದಾರೆ ಆದರೆ ಬಿಜೆಪಿ ಸರ್ಕಾರ ಇದರಲ್ಲಿ ದುಡ್ಡು ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಇದರಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಆಡಳಿತ ಪಕ್ಷದ ಭ್ರಷ್ಟಾಚಾರ ಮಾಡಿಲ್ಲ ಎಂದರೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದರು.
ಮರಳಿ ಪ್ರವಾಹ ಬಂದರು ಕಳೆದ ಕೃಷ್ಣಾ ನದಿ ಪ್ರವಾಹದ ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡಿಲ್ಲ, ಪ್ರವಾಹದಲ್ಲಿ ಮೃತಪಟ್ಟ ಹಲ್ಯಾಳ ಗ್ರಾಮದ ಬಾಲಕನ ಕುಟುಂಬಕ್ಕೆ ಪರಿಹಾರ ವಿತರಣೆ ಮಾಡಿಲ್ಲ, ಸ್ಥಳಿಯ ಶಾಸಕರು ಎಷ್ಟರಮಟ್ಟಿಗೆ ಜನಪರವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬುದು ತಿಳಿಯುತ್ತದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.