ಅಥಣಿ (ಬೆಳಗಾವಿ):ಲಾಕ್ಡೌನ್ನಿಂದಾಗಿ ಕೊಪ್ಪಳದಲ್ಲಿ ಸಿಲುಕಿದ್ದ ಅಥಣಿಯ ಕೂಲಿಕಾರ್ಮಿಕರು ಮರಳಿ ಸ್ವಂತ ಊರಿಗೆ ತಲುಪಿದ್ದಾರೆ. ಡಿಸಿಎಂ ಲಕ್ಷ್ಮಣ್ ಸವದಿ ಮಾರ್ಗದರ್ಶನದಂತೆ ಕೊಪ್ಪಳ ಜಿಲ್ಲಾಧಿಕಾರಿಗಳ ಮುಖಾಂತರ ಇಂದು ಸಾರಿಗೆ ಇಲಾಖೆ ಸಹಾಯದಿಂದ ಮರಳಿ ತಾಲೂಕಿಗೆ ಆಗಮಿಸಿದರು.
ಕೆಲಸ ಅರಸಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದ್ದಲಗುಂದಿ ಗ್ರಾಮದ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡಲು ಅಥಣಿ ತಾಲೂಕಿನ ರಡ್ಡೇರಹಟ್ಟಿ, ಮೋಳೆ, ಕನ್ನಾಳದಿಂದ ಸುಮಾರು 25 ಜನ ಕಾರ್ಮಿಕರು ಮಾರ್ಚ್ 17 ರಂದು ತಮ್ಮ ಗ್ರಾಮಗಳನ್ನು ಬಿಟ್ಟು ಹೋಗಿದ್ದರು. ಅಲ್ಲಿಯೇ ಒಂದು ತಿಂಗಳಿಂದ ಕೆಲಸದಲ್ಲಿ ತೊಡಗಿದ್ದರು. ಇವರ ಕೆಲಸ ಮುಗಿದಿದ್ದರು ತಮ್ಮ ಗ್ರಾಮಕ್ಕೆ ಮರಳಿ ಬರಲು ಲಾಕ್ಡೌನ್ನಿಂದ ವಾಹನಗಳ ಸಂಚಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು.