ಅಥಣಿ : ಕೊರೊನಾ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಅಥಣಿ ಪಟ್ಟಣನ್ನು ಮತ್ತೆ ಒಂದು ವಾರಗಳ ಕಾಲ ಸ್ವಯಂ ಘೋಷಿತವಾಗಿ ಬಂದ್ ಮಾಡಲು ಇಲ್ಲಿನ ವ್ಯಾಪಾರಸ್ಥರ ಸಂಘ ನಿರ್ಧರಿಸಿದೆ.
ತಾಲೂಕಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಜುಲೈ 4 ರಂದು ತುರ್ತು ಸಭೆ ನಡೆಸಿ ಹತ್ತು ದಿನಗಳವರೆಗೆ ಸಂಪೂರ್ಣ ವ್ಯಾಪಾರ ವಹಿವಾಟು ಸ್ಥಗಿತ ಮಾಡುತ್ತೇವೆ ಎಂದು ಸ್ಥಳಿಯ ಶಾಸಕ ಮಹೇಶ್ ಕುಮಟಳ್ಳಿ ನೇತೃತ್ವದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ಕಳೆದ ಎಂಟು ದಿನಗಳಿಂದ ಪಟ್ಟಣ ಸ್ಥಬ್ಧಗೊಂಡಿತ್ತು.
ಪರಿಸ್ಥಿತಿಯ ಗಂಭೀರತೆ ಅರಿತ ವರ್ತಕರು ಮತ್ತೆ ಶಿವಣಗಿ ಸಂಸ್ಕೃತಿ ಭವನದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತದ ಜೊತೆಗೂಡಿ ಸಭೆ ನಡೆಸಿ ಜುಲೈ 20 ರವರೆಗೆ ಸ್ವಯಂ ಪ್ರೇರಿತ ಸಂಪೂರ್ಣ ಲಾಕ್‌ಡೌನ್ ಮಾಡಲು ತೀರ್ಮಾನಿಸಿದ್ದಾರೆ.
ಜುಲೈ 20 ರ ವರೆಗೆ ಅಥಣಿ ಬಂದ್ 20 ನೇ ತಾರೀಕಿನವರೆಗೆ ಪಟ್ಟಣದಲ್ಲಿ ಅಗತ್ಯ ವಸ್ತುಗಳು ಬಿಟ್ಟು ಬೇರೆ ಯಾವುದೇ ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೆ ಅವಕಾಶ ಇರುವುದಿಲ್ಲ ಎಂದು ನಿರ್ಣಯ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮಾತನಾಡಿ, ಒಂದು ವಾರದಿಂದ ಅಥಣಿ ತಾಲೂಕಿನಲ್ಲಿ ಸ್ವಯಂ ಘೋಷಿತವಾಗಿ ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಿರುವ ವ್ಯಾಪಾರಸ್ಥರಿಗೆ ಸರ್ಕಾರದ ಪರವಾಗಿ ಧನ್ಯವಾದ ತಿಳಿಸಿದರು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೋಗ ಮುಕ್ತ ಸಮಾಜ ನಿರ್ಮಿಸೋಣ ಎಂದು ತಿಳಿಸಿದರು.