ಬೆಳಗಾವಿ: ಇಲ್ಲಿನ ಕೋಟೆ ಆವರಣದಲ್ಲಿ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ದೇಶದ ಅತೀ ಉದ್ದದ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ಬೆಳಗಾವಿ ಉತ್ತರ ಕ್ಷೇತ್ರದ ನೂತನ ಶಾಸಕ ಆಸೀಫ್ (ರಾಜು) ಸೇಠ್ ಇಂದು ಚಾಲನೆ ನೀಡಿದರು.
ಫಿರೋಜ್ ಸೇಠ್ ಶಾಸಕರಾಗಿದ್ದ ವೇಳೆ ಕಿಲ್ಲಾ ಕೆರೆ ಆವರಣದಲ್ಲಿ ಅತೀ ಎತ್ತರದ 110 ಮೀಟರ್ ಧ್ವಜಸ್ತಂಭ ನಿರ್ಮಿಸಿ ರಾಷ್ಟ್ರಧ್ವಜ ಹಾರಾಟಕ್ಕೆ ಚಾಲನೆ ನೀಡಲಾಗಿತ್ತು. ಬಳಿಕ ಕಳೆದ ಹಲವು ದಿನಗಳಿಂದ ನಿರ್ವಹಣೆ ಕೊರತೆಯಿಂದ ಧ್ವಜ ಹಾರಾಟ ಸ್ಥಗಿತಗೊಳಿಸಲಾಗಿತ್ತು. ಈಗ ಶಾಸಕರಾದ ನಂತರ ಮೊದಲ ಕೆಲಸವೇ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ರಾಜು ಸೇಠ್ ತಮ್ಮ ಸಹೋದರ ಫಿರೋಜ್ ಸೇಠ್ ಜೊತೆ ಸೇರಿ ಲೋಕಾರ್ಪಣೆ ಮಾಡಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಜು ಸೇಠ್, "ರಾಷ್ಟ್ರಧ್ವಜ ನಮ್ಮ ಸ್ವಾಭಿಮಾನದ ಪ್ರತೀಕ. ರಾಷ್ಟ್ರಾಭಿಮಾನ ಗೌರವ, ಹೃದಯದಿಂದ ಬರಬೇಕು. ಪ್ರತಿಯೊಬ್ಬರೂ ದೇಶದ ಧ್ವಜಕ್ಕೆ ಗೌರವ ನೀಡಬೇಕು. ಕೇವಲ ಮಾತಿನಲ್ಲಿ ದೇಶದ ಪರವಾಗಿ ಕೆಲಸ ಮಾಡುವುದು ಬೇಡ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಎಲ್ಲರೂ ತಲೆ ಎತ್ತಿ ಧ್ವಜವನ್ನು ನೋಡುವಂತಾಗಬೇಕು. ಅಲ್ಲದೇ ಕಿಲ್ಲಾ ಕೋಟೆಯ ಕೆರೆಯಲ್ಲಿ ರಾಷ್ಟ್ರ ಧ್ವಜ ಪ್ರತಿದಿನ ಹಾರಾಡಬೇಕೆಂದು ಪ್ರಣಾಳಿಕೆಯಲ್ಲಿತ್ತು. ಹೀಗಾಗಿ ಮೊದಲ ಕೆಲಸಕ್ಕೆ ಚಾಲನೆ ನೀಡಿದ್ದೇನೆ. ರಾಷ್ಟ್ರ ಧ್ವಜ ನಿರಂತರವಾಗಿ ಹಾರಾಡಬೇಕೆಂದು ಪಾಲಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನಗರದಲ್ಲಿ ವಿವಿಧ ಕಾಮಗಾರಿಗಳ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜು ಸೇಠ್, ಎಲ್ಲರೂ ತೆರಿಗೆ ಕಟ್ಟುವುದು ಯಾಕೆ.? ರಾಜ್ಯ, ಜಿಲ್ಲೆ, ನಗರ ಅಭಿವೃದ್ಧಿಯಾಗಬೇಕು. ಬಾಕಿ ಉಳಿದ ಕಾಮಗಾರಿಗಳ ಬಗ್ಗೆ ಪಾಲಿಕೆ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. 15 ದಿನ ಕಾಲಾವಕಾಶ ನೀಡಿದ್ದಾರೆ. ಕೆಲಸ ಮಾಡದ ಗುತ್ತಿಗೆದಾರರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಂಡು ಬೇರೆ ಗುತ್ತಿಗೆದಾರರನ್ನು ನೇಮಕ ಮಾಡಲಾಗುವುದು. ಇನ್ನು ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಎರಡು-ಮೂರು ದಿನಗಳಲ್ಲಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.