ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಈ ಬಾರಿ ಅವಿಭಜಿತ ಗೋಕಾಕ ತಾಲೂಕಿನ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದರು. ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ವೀರಶೈವ-ಲಿಂಗಾಯತ ಸಮಾಜದ ಜನಸಂಖ್ಯೆ ಹೆಚ್ಚಿದೆ. ಗೋಕಾಕ ಕ್ಷೇತ್ರದಿಂದ ದಿ.ನಿಂಗಪ್ಪ ಕರಲಿಂಗನ್ನವರ ಮೊದಲ ಚುನಾವಣೆಯಲ್ಲಿ ಗೆದ್ದಿದ್ದು ಬಿಟ್ಟರೆ ಈವರೆಗೆ ಲಿಂಗಾಯತ ಸಮುದಾಯದ ಯಾವೊಬ್ಬರೂ ಶಾಸಕರಾಗಿ ಆಯ್ಕೆಯಾಗಿಲ್ಲ.
ಇದಕ್ಕೆ ಪ್ರಮುಖ ಕಾರಣ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದುದು. 2008ರಲ್ಲಿ ಸಾಮಾನ್ಯ ಕ್ಷೇತ್ರವಾದ ಬಳಿಕವೂ ನಮ್ಮ ಸಮುದಾಯದವರು ಶಾಸಕರಾಗಿಲ್ಲ. ಅಲ್ಲದೇ ಅರಭಾವಿ ಕ್ಷೇತ್ರದಲ್ಲಿ ಕಳೆದ ಐದು ಚುನಾವಣೆಗಳಲ್ಲೂ ಇದೇ ರೀತಿ ಆಗಿದೆ. ಇದರಿಂದ ಸಮುದಾಯದ ಜನ ಹತಾಶೆಗೊಂಡಿದ್ದು, ಸಮುದಾಯಕ್ಕೆ ಶಕ್ತಿ ಮತ್ತು ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಲಿಂಗಾಯತರಿಗೆ ಟಿಕೆಟ್ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಜಾರಕಿಹೊಳಿ, ಹೆಬ್ಬಾಳಕರ್ ಕುಟುಂಬದವರು ಸ್ಫರ್ಧಿಸಿದರೂ ಬೆಂಬಲ: ಕರ್ನಾಟಕದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಇರುವುದರಿಂದ ಲೋಕಸಭಾ ಚುನಾವಣೆಯನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ಬೆಳಗಾವಿಯ ಎರಡೂ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ಸಚಿವರಿದ್ದಾರೆ. ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ಇಲ್ಲವೇ ಅವರ ಕುಟುಂಬದವರು ಯಾರಾದರೂ ಸ್ಪರ್ಧಿಸಿದರೂ ನಾವು ಬೆಂಬಲಿಸುತ್ತೇವೆ. ಅವರನ್ನು ಹೊರತುಪಡಿಸಿ ಬೇರೆಯವರಿಗೆ ಮಣೆ ಹಾಕಿದರೆ ಅವಿಭಜಿತ ಗೋಕಾಕ ತಾಲೂಕಿನ ಲಿಂಗಾಯತರನ್ನು ಪರಿಗಣಿಸಬೇಕು ಎಂದ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು.