ಕರ್ನಾಟಕ

karnataka

ETV Bharat / state

ಬೆಳಗಾವಿ ಜಿಪಂ ಕಚೇರಿ ಮುಂದೆ ಆಶಾ ಕಾರ್ಯಕರ್ತೆಯರ ಶಕ್ತಿ ಪ್ರದರ್ಶನ - ಕುಂದು ಕೊರತೆ ಸಭೆ

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು.

ಆಶಾ ಕಾರ್ಯಕರ್ತೆಯರು
ಆಶಾ ಕಾರ್ಯಕರ್ತೆಯರು

By ETV Bharat Karnataka Team

Published : Dec 18, 2023, 5:44 PM IST

Updated : Dec 18, 2023, 6:07 PM IST

ಸಂಘದ ರಾಜ್ಯ ಕಾರ್ಯದರ್ಶಿ ಡಿ ನಾಗಲಕ್ಷ್ಮಿ

ಬೆಳಗಾವಿ : ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಬೆಳಗಾವಿ ನಗರದ ಸರ್ದಾರ್ಸ್ ಮೈದಾನದಿಂದ ಜಿ. ಪಂ ಕಚೇರಿವರೆಗೂ ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿದರು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ)ದ ನೇತೃತ್ವದಲ್ಲಿ ಧರಣಿ ನಡೆಸಿದ ಸಾವಿರಾರು‌ ಆಶಾ ಕಾರ್ಯಕರ್ತೆಯರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹಧನವು ಆರ್‌ಸಿಹೆಚ್ ಪೋರ್ಟಲ್‌ಗೆ ಲಿಂಕ್ ಮಾಡಿದ್ದರಿಂದ ನಮ್ಮ ಸೇವೆಗೆ ತಕ್ಕ ವೇತನ ಸಿಗುತ್ತಿಲ್ಲ. ಹಾಗಾಗಿ, 15 ಸಾವಿರ ವೇತನ ನಿಗದಿ ಪಡಿಸಬೇಕು. ಇನ್ನು ಮೊಬೈಲ್ ಆಧಾರಿತ ಕೆಲಸ ಕೈಬಿಡಬೇಕು. ಎನ್‌ಸಿಡಿ, ಎಸಿಎಫ್, ಟಿಬಿ ಸಂಬಂಧಿತ ಕೆಲಸಕ್ಕೆ ವರ್ಷಗಟ್ಟಲೇ ಪ್ರೋತ್ಸಾಹಧನ ನೀಡುತ್ತಿಲ್ಲ. ಅಲ್ಲದೇ ಆಶಾಗಳಲ್ಲದ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಅಧಿಕಾರಿಗಳ ಕಿರುಕುಳದಿಂದ ನಮಗೆ ಸಾಕು ಸಾಕಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ಡಿ ನಾಗಲಕ್ಷ್ಮಿ ಮಾತನಾಡಿ, ಕಳೆದ 15 ವರ್ಷಗಳಿಂದ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಮತ್ತು ಜನಸಾಮಾನ್ಯರ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ದುಡಿತಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಕೇಂದ್ರದಿಂದ ಸಿಗುವ ಇನ್ಸೆಂಟಿವ್​ನಲ್ಲಿ ಅನ್ಯಾಯ ಆಗುತ್ತಿದೆ. ಆರ್​ಸಿಹೆಚ್ ಪೋರ್ಟಲ್ ಸಮಸ್ಯೆ ಜಿಲ್ಲಾ ಮಟ್ಟದಲ್ಲೇ ಬಗೆಹರಿಸಬಹುದು. ಇನ್ನು ಬೆಳಗಾವಿಯಲ್ಲಿ ಕಳೆದ ಎಂಟು ವರ್ಷಗಳಿಂದ ಕುಂದು ಕೊರತೆ ಸಭೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷೆ ಸುಜಾತಾ ಕಾಡಮಠ

ಬಾಕಿ ವೇತನ ತಕ್ಷಣ ನೀಡಬೇಕು: ಸಂಘದ ಜಿಲ್ಲಾ ಉಪಾಧ್ಯಕ್ಷೆ ಸುಜಾತಾ ಕಾಡಮಠ ಮಾತನಾಡಿ, ಆರ್​ಸಿಹೆಚ್ ಪೋರ್ಟಲ್‌ ವಿವಿಧ ಸಮಸ್ಯೆಗಳ ಕಾರಣಗಳಿಂದ ಬಾಕಿ ಪ್ರೋತ್ಸಾಹ ಧನದ ಸರಾಸರಿ ಮೊತ್ತ, ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಕಳೆದ ಮೂರು ವರ್ಷಗಳಲ್ಲಿ ಇದುವರೆಗೆ ಪಾವತಿ ಆಗದಿರುವ ಎಎನ್‌ಸಿ, ಪಿಎನ್ ಹಾಗೂ ಹೆಚ್​ಬಿಎನ್​ಸಿ, ಎಂಆರ್ 1 ಮತ್ತು ಎಂಆರ್ 2 ಪ್ರೋತ್ಸಾಹಧನದ ಲೆಕ್ಕಾಚಾರ ಮಾಡಿ ಪಾವತಿಸಬೇಕು. ಕೋವಿಡ್-19 ವಿಶೇಷ ಪ್ರೋತ್ಸಾಹಧನ, ನಾನ್-ಎಮ್ಎಸ್ ಹಣ 2 ಸಾವಿರ ರೂ ಹಾಗೂ ಬಾಕಿ ವೇತನ ತಕ್ಷಣ ನೀಡಬೇಕು ಎಂದರು.

ಪ್ರತಿ ತಿಂಗಳು ಕ್ಷೇಮ್ ಹಾಗೂ ಸ್ಯಾಂಕ್ಷನ್ ಪ್ರತಿ ಕಡ್ಡಾಯವಾಗಿ ವಿತರಿಸಬೇಕು. ತಮ್ಮ ಕಾರ್ಯಕ್ಷೇತ್ರದ ಹೊರಗೆ ಮತ್ತು ನಗರ ಸಮೀಕ್ಷೆಗೆ ನಿಯೋಜಿಸಬಾರದು. ಇಲಾಖೆ ಆದೇಶದಂತೆ ಗೌರವಧನ ಇಲ್ಲದೇ ಪರೀಕ್ಷೆ ಹಾಗೂ ಚುನಾವಣೆಗೆ ಯಾವುದೇ ಕಾರಣಕ್ಕೂ ನಿಯೋಜನೆ ಮಾಡಬಾರದು. ಸ್ಫೋಟಮ್ ತರುವುದಕ್ಕೆ ಒತ್ತಾಯಿಸಬಾರದು ಎಂದು ಆರೋಗ್ಯ ಇಲಾಖೆಯ ನಿರ್ದೇಶನ ಇದ್ದರೂ ಪಿಹೆಚ್‌ಸಿ ಮಟ್ಟದಲ್ಲಿ ಒತ್ತಡ ಹಾಕಲಾಗುತ್ತಿರುವುದು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳ ಕಿರುಕುಳ ಇಲ್ಲ:ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿ ಪಂ. ಸಿಇಓ ಹರ್ಷಲ್ ಭೊಯರ್, ಆಶಾ ಕಾರ್ಯಕರ್ತರ ಸಮಸ್ಯೆಗಳು ಗಮನಕ್ಕೆ ಬಂದಿದ್ದು, ಇದೇ ತಿಂಗಳು 27ರಂದು ಕುಂದು ಕೊರತೆ ಸಭೆ ನಡೆಸುತ್ತೇನೆ. ಇನ್ನು ಅಧಿಕಾರಿಗಳ ಕಿರುಕುಳ ಇಲ್ಲ. ಒಂದು ವೇಳೆ ಹಾಗೇನಾದರೂ ಆಗಿದ್ದರೆ ವಿಚಾರಿಸುತ್ತೇನೆ ಎಂದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಜಡಗನ್ನವರ, ಉಪಾಧ್ಯಕ್ಷೆ ರೂಪಾ ಅಂಗಡಿ, ಕಾರ್ಯದರ್ಶಿ ಗೀತಾ ರಾಯಗೋಳ, ಲತಾ ಜಾಧವ, ಲಕ್ಷ್ಮೀ ಕುರುಬೇಟ, ಸುನಂದಾ ಕೋಳಿ ಸೇರಿ ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಭಾಗಿಯಾಗಿದ್ದರು.

ಇದನ್ನೂ ಓದಿ :ತಿಂಗಳಿಗೆ 12 ಸಾವಿರ ರೂಪಾಯಿ ವೇತನ ನೀಡಿ; ಆಶಾ ಕಾರ್ಯಕರ್ತೆಯರ ಮನವಿ!

Last Updated : Dec 18, 2023, 6:07 PM IST

ABOUT THE AUTHOR

...view details