ಚಿಕ್ಕೋಡಿ :ಜೂನ್ ಮೊದಲ ವಾರದಲ್ಲಿ ರೈತರು ಬಿತ್ತನೆ ಕಾರ್ಯ ಪ್ರಾರಂಭಿಸಬೇಕಾಗಿತ್ತು. ಆದರೆ, ಜೂನ್ ಮೊದಲ ವಾರದಲ್ಲಿ ಸತತವಾಗಿ ಮಳೆಯಾಗಿದ್ದರಿಂದ ಜಮೀನಿನಲ್ಲಿ ನೀರು ನಿಂತ ಪರಿಣಾಮ ಬಿತ್ತನೆ ಸ್ವಲ್ಪ ತಡವಾಗಿದೆ.ಇದೀಗ ತಿಂಗಳ ಕೊನೆಯ ವಾರದಲ್ಲಿ ಬಿತ್ತನೆ ಚುರುಕುಗೊಂಡಿದೆ.
ಚಿಕ್ಕೋಡಿ ಉಪವಿಭಾಗದಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಮೆಕ್ಕೆಜೋಳ, ಜೋಳ, ರಾಗಿ, ಹೆಸರು, ಸೋಯಾ, ಮುಸುಕಿನ ಜೋಳ ಸೇರಿದಂತೆ ಮುಂಗಾರು ಬೆಳೆಯನ್ನು ಬೆಳೆಯುತ್ತಿರುವ ರೈತರು ಕಬ್ಬು ಸೇರಿದಂತೆ ಚಿಕ್ಕೋಡಿ ಉಪವಿಭಾಗದಲ್ಲಿ ಮುಂಗಾರು ಹಂಗಾಮಿನಲ್ಲಿ 3,91,245 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಇದರಲ್ಲಿ ಈಗಾಗಲೇ 2,41,443 ಹೆಕ್ಟೇರ್ ಅಂದರೆ (ಶೇ 62) ಭೂಮಿಯಲ್ಲಿ ರೈತರು ಬಿತ್ತನೆ ಪೂರ್ಣಗೊಳಿಸಿದ್ದಾರೆ. ಇನ್ನು ಕೆಲ ರೈತರ ಜಮೀನಿನಲ್ಲಿ ಮಳೆ ನೀರು ನಿಂತ ಪರಿಣಾಮ ಬಿತ್ತನೆಗೆ ವಿಳಂಬವಾಗಿದೆ.
ಈಗಾಗಲೇ ಚಿಕ್ಕೋಡಿ ಉಪವಿಭಾಗದಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು ಅಥಣಿಯಲ್ಲಿ ಈವರೆಗೆ 46,127 ಹೆಕ್ಟೇರ್ ಭೂಮಿಯಲ್ಲಿ (ಶೇ 57) ಬಿತ್ತನೆಯಾಗಿದೆ. ಚಿಕ್ಕೋಡಿಯಲ್ಲಿ 55,781 ಹೆಕ್ಟೇರ್ ಭೂಮಿಯಲ್ಲಿ (ಶೇ 63) ಬಿತ್ತನೆಯಾಗಿದೆ. ಹುಕ್ಕೇರಿಯಲ್ಲಿ 49,181 ಹೆಕ್ಟೇರ್ ಭೂಮಿಯಲ್ಲಿ (ಶೇ 76) ಬಿತ್ತನೆಯಾದರೆ ರಾಯಬಾಗದಲ್ಲಿ 23,873 ಹೆಕ್ಟೇರ್ ಭೂಮಿಯಲ್ಲಿ (ಶೇ 42) ರಷ್ಟು ಬಿತ್ತನೆ ಕಾರ್ಯ ಮುಗಿದಿದೆ.
ಈ ಬಾರಿ ಗಡಿ ಭಾಗದಲ್ಲಿ ಮೆಕ್ಕೆಜೋಳ ಕಡಿಮೆ ಪ್ರಮಾಣದಲ್ಲಿ ಬೆಳೆದಿದ್ದು ಅಥಣಿ ಭಾಗದಲ್ಲಿ 12,050 ಹೆಕ್ಟೇರ್ ಗುರಿಯಲ್ಲಿ 1,345 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಚಿಕ್ಕೋಡಿಯಲ್ಲಿ 12,500 ಹೆಕ್ಟೇರ್ ನಲ್ಲಿ 4,661 ಬಿತ್ತನೆ ಪೂರ್ಣಗೊಂಡಿದೆ. ಹುಕ್ಕೇರಿಯಲ್ಲಿ 7,500 ಹೆಕ್ಟೇರ್‌ನಲ್ಲಿ 2,759 ಬಿತ್ತನೆ ಪೂರ್ಣಗೊಂಡರೆ, ರಾಯಬಾಗದಲ್ಲಿ 18,450 ಹೆಕ್ಟೇರ ನಲ್ಲಿ 1,950 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಚಿಕ್ಕೋಡಿ ಉಪವಿಭಾಗದಲ್ಲಿ ಸೋಯಾ ಕೂಡ ಹೆಚ್ಚಾಗಿ ಬೆಳದಿದ್ದು ಈಗಾಗಲೇ ಅಥಣಿಯಲ್ಲಿ 1,217 ಚಿಕ್ಕೋಡಿಯಲ್ಲಿ 7,840 ಹುಕ್ಕೇರಿಯಲ್ಲಿ 22,195 ಹಾಗೂ ರಾಯಬಾಗದಲ್ಲಿ 795 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ಇನ್ನುಳಿದ ಪ್ರದೇಶದಲ್ಲಿ ರೈತರು ಭೂಮಿ ಹದ ಮಾಡಿಬಿತ್ತನೆ ಮಾಡಲು ತಯಾರಿ ನಡೆಸಿದ್ದು ಮುಂದಿನ ವಾರದಲ್ಲಿ ಮತಷ್ಟು ಬಿತ್ತನೆಗಳಾಗುವ ನಿರೀಕ್ಷೆ ಇದೆ ಎಂದು ಕೃಷಿ ಅಧಿಕಾರಿ ಕೋಳೆಕರ ಮಾಹಿತಿ ನೀಡಿದ್ದಾರೆ.