ಬೆಳಗಾವಿ:ನಾಳೆ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಹಿನ್ನೆಲೆ ಗೋವಾ ಸರ್ಕಾರ ಕಾರ್ಮಿಕರಿಗೆ ನಾಳೆ ವೇತನ ಸಹಿತ ರಜೆ ಘೋಷಿಸಿದೆ. ಹೀಗಾಗಿ ಮತದಾನದ ಮಾಡಲು ಸಾವಿರಾರು ಕನ್ನಡಿಗರು ಗೋವಾದಿಂದ ಕರ್ನಾಟಕದ ಸ್ವಗ್ರಾಮಗಳತ್ತ ಆಗಮಿಸುತ್ತಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಗೋವಾದಿಂದ ರಾಜ್ಯಕ್ಕೆ ಕನ್ನಡಿಗರು ಆಗಮಿಸುತ್ತಿರುವ ಬಸ್‌ಗಳು ಫುಲ್ ರಶ್ ಆಗಿ ಬರುತ್ತಿವೆ. ಇನ್ನು ಕೆಲವೊಂದಿಷ್ಟು ರಾಜಕೀಯ ಪಕ್ಷಗಳ ನಾಯಕರು ಹೀಗೆ ಬರುತ್ತಿರುವ ಕಾರ್ಮಿಕರಿಗೆ ಬಸ್‌ಗಳ ವ್ಯವಸ್ಥೆ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಬೆಳಗಾವಿ ತಾಲೂಕಿನ ಪೀರನವಾಡಿ ಚೆಕ್ಪೋಸ್ಟ್ನಲ್ಲಿ ಗೋವಾದಿಂದ ಬರುವ ಎಲ್ಲಾ ವಾಹನಗಳನ್ನು ಪೊಲೀಸ್ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಗೋವಾ ಸರ್ಕಾರವು ಮೇ 10ರಂದು ವೇತನ ಸಹಿತ ರಜೆ ಘೋಷಣೆ ಮಾಡಿದೆ. ಇದು ಸರ್ಕಾರಿ ಮತ್ತು ಕೈಗಾರಿಕಾ ನೌಕರರು ಸೇರಿದಂತೆ ಎಲ್ಲಾ ಖಾಸಗಿ ಕಂಪನಿಗಳಿಗೂ ಅನ್ವಯವಾಗಲಿದೆ. ಈ ನಿರ್ಧಾರದಿಂದ ಗೋವಾದಲ್ಲಿರುವ ಕನ್ನಡಿಗರು ರಾಜ್ಯಕ್ಕೆ ಮರಳಿ ಮತದಾನ ಮಾಡಲು ಸಹಕಾರಿಯಾಗಲಿದೆ. ಇನ್ನು ಗೋವಾ ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಪಕ್ಷಗಳು ಮೂರ್ಖ ನಿರ್ಧಾರ ಎಂದು ಕಿಡಿಕಾರಿವೆ.
ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗೋವಾ ಫಾರ್ವರ್ಡ್ ಪಾರ್ಟಿ ಈ ರಜೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಗೋವಾ ರಾಜ್ಯ ಕೈಗಾರಿಕೆಗಳ ಸಂಘ ಹೇಳಿದೆ. ಇನ್ನು ಗೋವಾ ಫಾರ್ವರ್ಡ್ ಪಾರ್ಟಿ ಟ್ವೀಟ್ ಮಾಡುವ ಮೂಲಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದೆ. ಗೋವಾ ರಾಜ್ಯ ಕೈಗಾರಿಕಾ ಸಂಘದ ಅಧ್ಯಕ್ಷ ದಾಮೋದರ್ ಕೋಚ್ಕರ್, ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ರಾಮ ನವಮಿಗೆ ರಜೆ ಘೋಷಿಸದವರು, ಈಗ ಕರ್ನಾಟಕ ಚುನಾವಣೆಗೆ ರಜೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆಮ್ ಆದ್ಮಿ ಪಕ್ಷದ ಗೋವಾ ಘಟಕದ ಅಧ್ಯಕ್ಷ ಅಮಿತ್ ಪಾಲೇಕರ್ ಕೂಡ ರಾಜ್ಯ ಸರ್ಕಾರದ ನಿರ್ಧಾರ ಮೂರ್ಖತನದ ಪರಮಾವಧಿ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:224 ಕ್ಷೇತ್ರಗಳಿಗೆ ನಾಳೆ ಮತದಾನ: 1.5 ಲಕ್ಷ ಪೊಲೀಸರ ಭದ್ರತೆ, ಏನಾಗುತ್ತೆ 2615 ಅಭ್ಯರ್ಥಿಗಳ ಹಣೆಬರಹ?