ಚಿಕ್ಕೋಡಿ (ಬೆಳಗಾವಿ): ಆರ್ಬಿಐ 2000 ನೋಟುಗಳನ್ನು ಬ್ಯಾಂಕಿಗೆ ಹಿಂತಿರುಗಿಸಿ ನೋಟು ಬದಲಾವಣೆಗೆ ಕಾಲಾವಧಿ ನೀಡಿದೆ. ಇದನ್ನೇ ಕೆಲವು ದಂಧೆಕೋರರು ಬಂಡವಾಳವಾಗಿ ರೂಪಿಸಿಕೊಂಡು ಗಡಿಯಲ್ಲಿ ದಂಧೆ ನಡೆಸುವುದಕ್ಕೆ ಮುಂದಾಗಿದ್ದರು. ಇದೀಗ ಆರೋಪಿಗಳನ್ನು ಕಾಗವಾಡ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಎರಡು ಸಾವಿರ ಮುಖಬೆಲೆಯ ಬದಲಾವಣೆ ನಮಗೆ ಸಾಧ್ಯವಾಗಿಲ್ಲ. ನೀವು ನಮಗೆ 5 ಲಕ್ಷ ರೂ. ಗಳನ್ನು ನೀಡಿದರೆ, ನಿಮಗೆ ನಾವು ಎರಡು ಸಾವಿರ ಮುಖಬೆಲೆಯ 6 ಲಕ್ಷ ರೂಪಾಯಿ ನೀಡುತ್ತೇವೆ ಎಂದು ಸಾರ್ವಜನಿಕರಿಗೆ ಪಂಗನಾಮ ಹಾಕುತ್ತಿದ್ದ ಜಾಲವೊಂಂದು ಕಾಗವಾಡ ಮತ್ತು ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿರುವ ಸಂದರ್ಭದಲ್ಲಿ ಕಾಗವಾಡ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿತರಾದ ಸಾಗರ ಜಾಧವ್, ಆರೀಫ್ ಸಾಗರ, ಲಕ್ಷ್ಮಣ್ ನಾಯಕ್ ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಈ ಮೂವರು ಆರೋಪಿಗಳು ಮಹಾರಾಷ್ಟ್ರದ ಮೂಲದ ಸಮೀರ್ ಭೋಸ್ಲೆಅವರನ್ನು ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮಕ್ಕೆ ಕರಿಸಿಕೊಂಡು ವಂಚನೆ ಮಾಡಿದ್ದರು. ಈ ಕುರಿತು ಸಮೀರ್ ಭೋಸ್ಲೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ ಒಂದು ದಿನದಲ್ಲಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಕಾಗವಾಡ ಪೊಲೀಸ್ ಠಾಣೆಯಲ್ಲಿ ಇವರು ವಿರುದ್ದ ಪ್ರಕರಣ ದಾಖಲಾಗಿದೆ.