ಬೆಳಗಾವಿ:ಚಿನ್ನಾಭರಣ ಮಳಿಗೆಯ ಮಾಲೀಕನಿಗೆ ಗನ್ ತೋರಿಸಿ ಸುಲಿಗೆ ಮಾಡಿದ್ದ ಆರೋಪಿಯನ್ನು ನಗರದ ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಮಜಗಾಂವಿಯ ಸಂತ ಜ್ಞಾನೇಶ್ವರ ನಗರದ ವೈಭವ ರಾಜೇಂದ್ರ ಪಾಟೀಲ (29) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ಮೂರು ಲಕ್ಷ ರೂ. ಮೌಲ್ಯದ ಬಂಗಾರದ ನಾಲ್ಕು ನೆಕ್ಲೆಸ್, ಕೃತ್ಯಕ್ಕೆ ಬಳಸಿದ್ದ ಕಂಟ್ರಿ ಪಿಸ್ತೂಲು, ಮೂರು ಜೀವಂತ ಗುಂಡು, ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಗನ್ ತೋರಿಸಿ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪಿಯ ಬಂಧನ ಎರಡು ದಿನಗಳ ಹಿಂದೆ ಇಲ್ಲಿನ ವಿಜಯನಗರದ ಸಮೃದ್ಧಿ ಜ್ಯುವೆಲರಿ ಶಾಪ್ಗೆ ಚಿನ್ನ ಖರೀದಿಸುವ ಸೋಗಿನಲ್ಲಿ ವೈಭವ್ ಹೋಗಿದ್ದ. ತನಗಿಷ್ಟವಾದ ನೆಕ್ಲೆಸ್ ಸೇರಿದಂತೆ ಚಿನ್ನಾಭರಣಗಳನ್ನು ಜೇಬಿಗೆ ಹಾಕಿಕೊಂಡಿರುವ ಆಸಾಮಿ ಮಾಲೀಕನಿಗೆ ಗನ್ ತೋರಿಸಿ ಪರಾರಿಯಾಗಿದ್ದ. ಈ ಕುರಿತು ಮಾಲೀಕ ಸಚಿನ್ ಬಾಂದಿವಾಡೆಕರ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಖಡೇಬಜಾರ್ ಎಸಿಪಿ ಎ.ಚಂದ್ರಪ್ಪ ನೇತೃತ್ವದಲ್ಲಿ ಕ್ಯಾಂಪ್ ಇನ್ಸ್ಪೆಕ್ಟರ್ ಡಿ.ಸಂತೋಷ ಕುಮಾರ ಹಾಗೂ ಎಎಸ್‌ಐ ಬಿ.ಆರ್.ಡೂಗ್ ಒಳಗೊಂಡ ತಂಡ ಎರಡೇ ದಿನದಲ್ಲಿ ಆರೋಪಿಯನ್ನು ಬಂಧಿಸಿದೆ.