ಬೆಳಗಾವಿ:ಮಲೆನಾಡು ಪ್ರದೇಶವನ್ನು ಹೊರತುಪಡಿಸಿ ಇದೀಗ ಬೇರೆ ಬೇರೆ ಪ್ರದೇಶಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಹೀಗಾಗಿ, ಸದ್ಯದಲ್ಲೇ ಅಡಿಕೆ ಬೆಳೆ ರೈತರಿಗೆ ಮಾರಕವಾಗಲಿದೆ. ಅಡಿಕೆ ಬೆಳೆ ಭವಿಷ್ಯ ಬಹಳ ದಿನ ಇರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ನಿಯಮ 69ರಡಿ ಸಾರ್ವಜನಿಕ ಜರೂರಿನ ವಿಷಯದ ಚರ್ಚೆ ವೇಳೆ ಹೆಚ್.ಎಂ. ರೇವಣ್ಣ ಅಡಿಕೆ ಬೆಳೆ ವಿಚಾರವಾಗಿ ಮಾತನಾಡುವಾಗ ಮಧ್ಯಪ್ರವೇಶಿಸಿದ ಅವರು, ನಾವೆಲ್ಲಾ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು. ಅಡಿಕೆಗೆ ಭವಿಷ್ಯ ಬಹಳ ದಿನ ಇರುವುದಿಲ್ಲ. ಹಾಗಾಗಿ, ಅದಕ್ಕೆ ಪ್ರೋತ್ಸಾಹ ಕೊಡಬಾರದು. ಕೇಂದ್ರ ಸರ್ಕಾರ ಬಯಲು ಸೀಮೆ ಕಡೆ ಡ್ರಿಪ್ ಇರಿಗೇಷನ್ ಅನ್ನು ತೆಗೆದು ಹಾಕಿದೆ. ಅಡಿಕೆ ಜಾಸ್ತಿ ಬೆಳೆಯುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ ಭವಿಷ್ಯಕ್ಕೆ ಅದು ಮಾರಕವಾಗುತ್ತದೆ. ರೈತರಿಗೆ ಇದನ್ನು ಹೇಳಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕಿಮ್ಮನೆ - ಆರಗ ಮಧ್ಯೆ ಯುವ ಕೃಷಿಕನನ್ನ ಅಭ್ಯರ್ಥಿಯಾಗಿ ಘೋಷಿಸಿದ ಕುಮಾರಸ್ವಾಮಿ
ಅಡಿಕೆ ಬೆಳೆಗೆ ಪ್ರೋತ್ಸಾಹ ಕೊಡುವುದು ಅನಗತ್ಯ. ರೈತರಿಗೆ ಇದು ಮಾರಕವಾಗಲಿದೆ. ಇನ್ನು 5-10 ವರ್ಷಗಳಲ್ಲಿ ಅಡಿಕೆ ಬೆಳೆ ಇರುವುದಿಲ್ಲ. ಒಂದು ವರ್ಷದಲ್ಲಿ ಒಂದು ಕೋಟಿ ಅಡಿಕೆ ನರ್ಸರಿ ಖಾಲಿಯಾಗುತ್ತಿದೆ. ಈ ರೀತಿ ಹೋದರೆ ಕಷ್ಟವಾಗಲಿದೆ. ನೀವು ಬೆಳೆಯುತ್ತೀರಾ ಎಂದು ನಮಗೆ ಹೊಟ್ಟೆ ಕಿಚ್ಚಿಲ್ಲ. ಆದ್ರೆ, ನೀವು ತೆಂಗು ಬೆಳೆಯುತ್ತಿದ್ದೀರಿ, ಆಲೂಗಡ್ಡೆ ಬೆಳೆಯುತ್ತಿದ್ದೀರಿ, ಸಮೃದ್ಧವಾಗಿದ್ದೀರ. ಈಗ ಅಡಿಕೆ ಬೆಳೆದು ಇನ್ನು ಐದು ವರ್ಷದಲ್ಲಿ ಬಾಯಿಗೆ ಮಣ್ಣು ಹಾಕಿ, ಅಡಿಕೆ ಗಿಡ ಕಡಿದು ಹಾಕಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಅಡಿಕೆ ಬೆಲೆ ಜಾಸ್ತಿಯಾಗಿರುವುದೇ ನಮಗೆ ಶಾಪವಾಗಿದೆ. ಏಕೆಂದರೆ ಅಡಿಕೆ ಬೆಳೆ ಎಲ್ಲಾ ಕಡೆ ವಿಸ್ತಾರ ಆಗುತ್ತಿದೆ ಎಂದು ಆತಂಕ ಹೊರಹಾಕಿದರು.
ಇದನ್ನೂ ಓದಿ:ರೈತರ ಸಮಸ್ಯೆ ಬಗ್ಗೆ ಮುಖಂಡರ ಜೊತೆ ಸಿಎಂ ಚರ್ಚೆ : ಸಚಿವ ಆರಗ ಜ್ಞಾನೇಂದ್ರ
ಇದೇ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ಗೃಹ ಸಚಿವರು ಹೇಳಿದ್ದನ್ನು ನಾನು ಒಪ್ಪುತ್ತೇನೆ. ಈಗ ಅಡಿಕೆ ಬೆಲೆ ನೋಡಿ ಮೂರು ನಾಲ್ಕು ಜಿಲ್ಲೆಗಳಲಿದ್ದ ಅಡಿಕೆ ಬೆಳೆ ಈಗ ಎಲ್ಲಾ ಕಡೆ ಬೆಳೆಯುತ್ತಿದ್ದಾರೆ. ಮಲೆನಾಡು ಬಿಟ್ಟು ಬಯಲು ಪ್ರದೇಶಗಳಲ್ಲೂ ನೂರು ಇನ್ನೂರು ಎಕರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಅವರಿಗೆ ಮಾಡಬಾರದು ಎಂಬ ನಿಯಮಾವಳಿ ಇಲ್ಲ. ರೈತರಿಗೆ ಯಾವುದು ಲಾಭದಾಯಕವೋ ಅದನ್ನು ಮಾಡುತ್ತಾರೆ. ಈಗಲೂ ಟೊಮೆಟೋ ಹಣ್ಣು ರಸ್ತೆಗೆ ಹಾಕುವುದು ಇದೆಯಲ್ಲಾ ಮುಂದೆ ಅದೇ ರೀತಿ ನಾವು ಅನುಭವಿಸಬೇಕಾಗುತ್ತದೆ. ರೈತರು ಒಂದು ಬೆಳೆಗೆ ಆದಾಯ ಬರುತ್ತದೆ ಎಂದು ಇನ್ನೊಂದು ಬೆಳೆ ಬೆಳೆಯುವುದನ್ನು ಬಿಟ್ಟರೆ ಅಸಮತೋಲನ ನಿರ್ಮಾಣವಾಗುವುದು ಎಂದು ಸಚಿವರ ಮಾತಿಗೆ ಧ್ವನಿಗೂಡಿಸಿದರು.
ಇದನ್ನೂ ಓದಿ:ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ತಡೆಗೆ ಜನರ ಬೆಂಬಲವೂ ಬೇಕು: ಸಚಿವ ಆರಗ