ಅಥಣಿ: ಗಡಿ ವಿಚಾರವಾಗಿ ಮಹಾರಾಷ್ಟ್ರ ಪದೇಪದೆ ತಕರಾರು ಮಾಡುತ್ತಿದೆ. ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ವಿಜಯ ಸೇನೆ ವತಿಯಿಂದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ವಿಜಯ ಸೇನೆಯ ಉತ್ತರ ಕರ್ನಾಟಕದ ಅಧ್ಯಕ್ಷ ಮಲ್ಲಿಕಾರ್ಜುನ್ ಭೃಂಗಿಮಠ, ನಾಡು-ನುಡಿ ವಿಚಾರದಲ್ಲಿ ರಾಜಕೀಯವನ್ನು ದೂರವಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ವಿಜಯ ಸೇನೆಯ ವತಿಯಿಂದ ಶಾಸಕ ಕುಮಟಳ್ಳಿಗೆ ಮನವಿ.. ನಂತರ ಅಥಣಿ ಘಟಕದ ಅಧ್ಯಕ್ಷ ಚಿದಾನಂದ ಶೇಗುಣಸಿ ಮಾತನಾಡಿ, ಬೆಳಗಾವಿಯಿಂದ ಅಥಣಿಯು ತುಂಬಾ ದೂರ. ಇದರಿಂದಾಗಿ ತಾಲೂಕಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಅಥಣಿಯನ್ನು ಜಿಲ್ಲೆ ಮಾಡಿ ತೇಲಸಂಗವನ್ನು ಹೊಸ ತಾಲೂಕು ಮಾಡಬೇಕೆಂದು ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಮಹೇಶ್ ಕುಮಟಳ್ಳಿ, ಗಡಿ ವಿವಾದ ಸುಪ್ರೀಂಕೋರ್ಟ್ನಲ್ಲಿರುವುದರಿಂದ ಆದಷ್ಟು ಬೇಗ ತೀರ್ಪು ಬರುವ ಸಾಧ್ಯತೆ ಇದೆ. ನೀವು ಹೇಳಿರುವ ಸಮಸ್ಯೆ ಹಾಗೂ ಸಲಹೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತರುತ್ತೇನೆಂದು ಹೇಳಿದರು. ಜೊತೆಗೆ ವಿಧಾನಸಭಾ ಕಲಾಪದಲ್ಲಿ ಈ ವಿಷಯವನ್ನು ಚರ್ಚೆ ಮಾಡುತ್ತೇನೆ. ನಾಡು, ನುಡಿ, ನೆಲ ಹಾಗೂ ಜಲದ ವಿಷಯದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.