ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದ ಆರೋಗ್ಯ ವಿಮೆ ವಿರುದ್ಧ ಮನವಿ; '2 ಆಸ್ಪತ್ರೆ, 4 ನೋಂದಣಿ ಕೇಂದ್ರಗಳಿಗೆ ನೋಟಿಸ್ : ಡಿಸಿ - ಡಿಸಿ ನಿತೇಶ್​ ಪಾಟೀಲ್

ಕುಂದಾನಗರಿಯಲ್ಲಿ ಮಹಾರಾಷ್ಟ್ರದ ಆರೋಗ್ಯ ವಿಮೆ ಜಾರಿ ಕುರಿತು ವಿರೋಧ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಯೋಜನೆಯನ್ನು ತಡೆಯುವಂತೆ ಅಶೋಕ ಚಂದರಗಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಮಾಡಿದ್ದು, ಆಸ್ಪತ್ರೆಗಳಿಗೆ ನೋಟಿಸ್​​ ನೀಡಲಾಗುವುದು ಎಂದು ಡಿಸಿ ಹೇಳಿದ್ದಾರೆ.

belagavi
ಮನವಿ

By ETV Bharat Karnataka Team

Published : Jan 11, 2024, 5:43 PM IST

Updated : Jan 11, 2024, 7:13 PM IST

ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್ ಮತ್ತು ಅಧ್ಯಕ್ಷ ಅಶೋಕ ಚಂದರಗಿ ಹೇಳಿಕೆ

ಬೆಳಗಾವಿ:ಬೆಳಗಾವಿಯಲ್ಲಿ ಮಹಾರಾಷ್ಟ್ರದ ಆರೋಗ್ಯ ವಿಮೆ ಜಾರಿ ವಿಚಾರ ಗಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಒಕ್ಕೂಟದ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್​​ ಅವರನ್ನು ಭೇಟಿಯಾಗಿ, ಆ ಯೋಜನೆಯನ್ನು ಬೆಳಗಾವಿಯಲ್ಲಿ ತಡೆಯುವಂತೆ ಮನವಿ ಮಾಡಿದ್ದಾರೆ.

ಮನವಿ ಸ್ವೀಕರಿಸಿ, ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್, ಮಹಾತ್ಮ ಜ್ಯೋತಿರಾವ್ ಫುಲೆ ಆರೋಗ್ಯ ವಿಮೆ ಜಾರಿಗೆ ಸಹಕರಿಸಿದ ಎರಡು ಆಸ್ಪತ್ರೆ ಮತ್ತು ಅರ್ಜಿ ಸ್ವೀಕರಿಸುತ್ತಿರುವ 4 ನೋಂದಣಿ ಕೇಂದ್ರಗಳಿಗೆ ನೋಟಿಸ್ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

'ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ 4 ನೋಂದಣಿ ಕೇಂದ್ರಗಳನ್ನು ತೆರೆದಿದೆ. ಇನ್ನೊಂದು ಕೇಂದ್ರ ತೆರೆಯುತ್ತಾರೆ ಎಂಬ ಮಾಹಿತಿ ಬಂದಿದೆ. ಇಂದು ಈ ಎಲ್ಲಾ ಕೇಂದ್ರಗಳಿಗೆ ನೋಟಿಸ್ ಕೊಡುತ್ತೇವೆ. ಆರೋಗ್ಯ ಇಲಾಖೆಯ ಕೆಪಿಎಂಇ ಆಕ್ಟ್ ಪ್ರಕಾರ ಇದೆಯೋ, ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡುತ್ತೇವೆ. ಬೇರೆ ರಾಜ್ಯದ ಯೋಜನೆ ಹೇಗೆ ಅನುಷ್ಠಾನ ಮಾಡಿದ್ದಿರಿ ಎಂದು ಎರಡು ಆಸ್ಪತ್ರೆಗಳಿಗೂ ಕಾರಣ ಕೇಳಿ ನೋಟಿಸ್ ಕೊಡುತ್ತೇವೆ. ಸರ್ಕಾರದಿಂದ ತ್ವರಿತವಾಗಿ ನಾವು ಮಾರ್ಗದರ್ಶನ ಪಡೆಯುತ್ತೇವೆ. ಸರ್ಕಾರದ ನಿರ್ದೇಶನ ಬಂದ ಬಳಿಕ ನಾವು ಕ್ರಮ ಕೈಗೊಳ್ಳುತ್ತೇವೆ. 24 ಗಂಟೆಯಲ್ಲಿ ಮಾಹಿತಿ ನೀಡುವಂತೆ ಎರಡು ಆಸ್ಪತ್ರೆಗಳಿಗೆ ನೋಟಿಸ್ ಕೊಡಲಾಗುತ್ತದೆ' ಎಂದು‌ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಆರೋಗ್ಯ ವಿಮೆ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅಲ್ಲದೇ ಗಡಿ ಅಭಿವೃದ್ಧಿ ಪ್ರಾಧಿಕಾರ, ಗಡಿ ಸಂರಕ್ಷಣಾ ಆಯೋಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೂ ಪತ್ರ ಬರೆಯುತ್ತೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ನವೆಂಬರ್​ನಲ್ಲಿ ಒಂದು ವಾರದ ಮಟ್ಟಿಗೆ ಮಹಾರಾಷ್ಟ್ರ ಸಂಸದ ಧೈರ್ಯಶೀಲ್ ಮಾನೆ ಬೆಳಗಾವಿ ಭೇಟಿಗೆ ನಿರ್ಬಂಧ ವಿಧಿಸಿದ್ದೆವು. ಆದರೆ ಈಗ ಅವರಿಗೆ ಯಾವುದೇ ನಿರ್ಬಂಧ ಇಲ್ಲ. ಎಲ್ಲ ರೀತಿಯ ಮಾಹಿತಿ ಪಡೆದು ಸಂಬಂಧಿಸಿದವರಿಗೆ ಶೋಕಾಸ್ ನೋಟಿಸ್ ಕೊಡುತ್ತೇನೆ. ಕರ್ನಾಟಕದ ಪ್ರತಿಯೊಬ್ಬ ನಾಗರಿಕರಿಗೆ ಈಗಾಗಲೇ ಕೇಂದ್ರ ಸರ್ಕಾರದ 5 ಲಕ್ಷದ ರೂಪಾಯಿ ವಿಮೆ ಸೌಲಭ್ಯವಿದೆ. ಹಾಗಾಗಿ, ಆರೋಗ್ಯ ಇಲಾಖೆಯ ನಿರ್ದೇಶನ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದರು.

ಅಧ್ಯಕ್ಷ ಅಶೋಕ ಚಂದರಗಿ ಹೇಳಿಕೆ:ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅಶೋಕ ಚಂದರಗಿ, 2023 ಮಾರ್ಚ್​ 2 ರಂದು ಕರ್ನಾಟಕದ ಬೆಳಗಾವಿ, ಕಾರವಾರ, ಬೀದರ್​​, ಕಲಬುರಗಿ ಹೀಗೆ ನಾಲ್ಕು ಜಿಲ್ಲೆಗಳ 865 ಗ್ರಾಮಗಳಲ್ಲಿ ಫುಲೆ ಜನಾರೋಗ್ಯ ವಿಮೆ ಜಾರಿ ಮಾಡಿದೆ. ಮರಾಠಿ ಜನರಿಗೆ ಮಾತ್ರ ಯೋಜನೆ ಜಾರಿ ಮಾಡುವ ಉದ್ದೇಶ ಮಹಾರಾಷ್ಟ್ರ ಹೊಂದಿದೆ. ಮಹಾರಾಷ್ಟ್ರ ಸರ್ಕಾರದ ಯೋಜನೆ ನಮ್ಮ ರಾಜ್ಯ ಪ್ರವೇಶಿಸಿದರೂ ಎಲ್ಲರೂ ಸುಮ್ಮನೆ ಇದ್ದಾರೆ. ಮಹಾರಾಷ್ಟ್ರ ಸಚಿವಾಲಯದಿಂದ ಆಸ್ಪತ್ರೆಗಳಿಗೆ ಹಣ ಸಂದಾಯ ಆಗುತ್ತದೆ. ಸುಪ್ರೀಂ ಕೋರ್ಟ್​ನಲ್ಲಿ 2004 ರಿಂದ ಗಡಿ ವಿವಾದ ಬಾಕಿ ಇದೆ. ಅಲ್ಲಿ ಹಿನ್ನಡೆ ಆಗಿರುವುದಕ್ಕೆ ಮುನ್ನಡೆ ಸಾಧಿಸಲು ಈ ರೀತಿ ಮಹಾರಾಷ್ಟ್ರ ಸರ್ಕಾರ ಕುತಂತ್ರ ಮಾಡುತ್ತಿದೆ. ಎಂಇಎಸ್ ಶಿಫಾರಸು ಮಾಡಿದ 5 ಲಕ್ಷ ರೂ.‌ ಹಣ ಆಸ್ಪತ್ರೆಗೆ ಸೇರುತ್ತದೆ ಎಂದು ಆರೋಪಿಸಿದರು.

ಬೆಳಗಾವಿಯಲ್ಲಿ ಒಂದು ವಾರದಿಂದ 5 ಕೇಂದ್ರಗಳು ಪ್ರಾರಂಭವಾಗಿವೆ. "ನಾನು ಮರಾಠಿಗ" ಎಂದು ಹೇಳಿಕೊಂಡು ಬಹಳಷ್ಟು ಜನ ಬೆನ್ನು ಬಿದ್ದಿದ್ದಾರೆ. ಮಹಾರಾಷ್ಟ್ರದ ಜನರಿಗೆ ನಾವು ಯಾವುದನ್ನೂ ಕೇಳದೆ ಚಿಕಿತ್ಸೆ ಕೊಡುತ್ತಿದ್ದೇವೆ. ಬೆಳಗಾವಿಯಲ್ಲಿ ಅರಿಹಂತ ಮತ್ತು ಕೆಎಲ್ಇ ಆಸ್ಪತ್ರೆಯನ್ನು ಆಯ್ಕೆ ಮಾಡಲಾಗಿದೆ. ಗಡಿಯಾದ್ಯಂತ 140 ಆಸ್ಪತ್ರೆಗಳನ್ನು ಅವರು ಗುರುತಿಸಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.‌ ರಾಜ್ಯದ್ರೋಹದ ಆರೋಪದಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿ ಪ್ರತಿಗಳನ್ನು ನಾವು ಸಿಎಂ, ಡಿಸಿಎಂ, ಕಾನೂನು ಸಚಿವರಿಗೆ ಕಳಿಸುತ್ತೇವೆ. ಕರ್ನಾಟಕ ಸರ್ಕಾರಕ್ಕೆ ಈ ಯೋಜನೆಯ ಗಂಭೀರತೆ ತಿಳಿಯುತ್ತಿಲ್ಲ. 2004ರಲ್ಲಿ ನಾವು ಸಲ್ಲಿಸಿರುವ ಕೇಸ್​ನಲ್ಲಿ ಬದಲಾವಣೆ ಮಾಡುತ್ತೇವೆ ಎಂದಿದ್ದಾರೆ. ಇದು ಕೇವಲ ಕನ್ನಡ ಪರ ಸಂಘಟನೆ ಮಾಧ್ಯಮಗಳ ಜವಾಬ್ದಾರಿ ಅಲ್ಲ. ಇದು ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಒಕ್ಕೂಟದ ಕಾರ್ಯಾಧ್ಯಕ್ಷ ಶಿವಪ್ಪ ಶಮರಂತ, ಉಪಾಧ್ಯಕ್ಷರಾದ ಎಂ.ಜಿ. ಮಕಾನದಾರ, ಶಂಕರ ಬಾಗೇವಾಡಿ, ಪದಾಧಿಕಾರಿಗಳಾದ ಮಲ್ಲಪ್ಪ ಅಕ್ಷರದ, ಸಲೀಮ ಖತೀಬ, ಸಾಗರ ಬೋರಗಲ್ಲ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ:ಹೊರಗುತ್ತಿಗೆ ಶಿಕ್ಷಕರಿಗೆ ಮೊದಲಿನಂತೆ ನೇರ ಸಂಬಳ ನೀಡಿ: ಆರ್​ ಅಶೋಕ್ ಆಗ್ರಹ

Last Updated : Jan 11, 2024, 7:13 PM IST

ABOUT THE AUTHOR

...view details