ಸುದ್ದಿಗೋಷ್ಠಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ಬೆಳಗಾವಿ:ಲೋಕಸಭೆ ಚುನಾವಣೆಗೆ ಪುತ್ರಿ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಮೊದಲು ಕಾರ್ಯಕರ್ತರಿಗೆ ಆದ್ಯತೆ ಕೊಡುತ್ತೇವೆ. ಅವಶ್ಯಕತೆ ಬಿದ್ದರಷ್ಟೇ ಪುತ್ರಿ ಸ್ಪರ್ಧಿಸಲಿದ್ದಾರೆ. ಒಂದು ವೇಳೆ ಪಕ್ಷ ಸೂಚಿಸಿದರೆ ನಾನೇ ಸ್ಪರ್ಧಿಸುತ್ತೇನೆ. ಕೊನೇ ಘಳಿಗೆಯಲ್ಲಿ ರಾಜಕಾರಣದಲ್ಲಿ ಏನೂ ಬೇಕಾದರೂ ಆಗಬಹುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜಿಲ್ಲೆಯ ಶಾಸಕರು, ಬ್ಲಾಕ್ ಅಧ್ಯಕ್ಷರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿ ಮತ್ತು ಸಮೀಕ್ಷೆ ವರದಿ ಆಧರಿಸಿ ಮುಂದಿನ 2 ತಿಂಗಳೊಳಗಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಿಸುತ್ತೇವೆ. ಈಗ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಆದರೆ ಇನ್ನೂ ಆಕಾಂಕ್ಷಿಗಳು ಯಾರೂ ತಮ್ಮ ಹೆಸರು ಕೊಟ್ಟಿಲ್ಲ. ಹಾಗಾಗಿ ಚುನಾವಣೆ ಘೋಷಣೆಯಾಗುವ ಮುನ್ನವೇ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್‌ಗೆ ರವಾನಿಸುತ್ತೇವೆ ಎಂದು ಮಾಹಿತಿ ನೀಡಿದರು.
ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಬೆಳಗಾವಿ ಬರ ಪೀಡಿತ ಜಿಲ್ಲೆಯೆಂದು ಘೋಷಿಸುತ್ತಿರಾ ಎಂಬ ಪ್ರಶ್ನೆಗೆ ಬೆಳಗಾವಿ ಮಾತ್ರವಲ್ಲ, ಇಡೀ ರಾಜ್ಯವನ್ನೇ ಬರಪೀಡಿತ ಎಂದು ಘೋಷಿಸುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮಳೆಯ ಪ್ರಮಾಣ ಆಧರಿಸಿ, ಯಾವ ಜಿಲ್ಲೆಗಳು ಬರಪೀಡಿತ ಪ್ರದೇಶಗಳೆಂದು ಶೀಘ್ರವೇ ಘೋಷಣೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬಜೆಟ್‌ನಲ್ಲಿ 4 ಸಾವಿರ ಹೊಸ ಬಸ್ ಖರೀದಿ:ಖಾನಾಪುರ ತಾಲೂಕಿನ ಹಳ್ಳಿಗಳಿಗೆ ಬಸ್ ಸೇವೆ ಇಲ್ಲದಿರುವ ಕುರಿತು, ನಮ್ಮಲ್ಲಿ ಬಸ್‌ಗಳ ಕೊರತೆಯಿದೆ. ಅದರಲ್ಲೂ ಖಾನಾಪುರ ತಾಲೂಕಿನಲ್ಲಿ ಸಮಸ್ಯೆ ಹೆಚ್ಚಿದೆ. ಇದಕ್ಕೆ ತಾತ್ಕಾಲಿಕವಾಗಿ ಅಗತ್ಯವಿರುವ ವ್ಯವಸ್ಥೆ ಮಾಡುತ್ತೇವೆ. ಕೆಲವೆಡೆ ಬಸ್‌ಗಳನ್ನು ಬಿಡಿಸುತ್ತೇವೆ. ಈ ಬಾರಿ ಬಜೆಟ್‌ನಲ್ಲಿ 4 ಸಾವಿರ ಹೊಸ ಬಸ್‌ಗಳನ್ನು ಖರೀದಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಆ ಬಸ್‌ಗಳು ಬಂದರೆ ಬಸ್ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.
ಮುನಿ ಹತ್ಯೆ ಪ್ರಕರಣ:ಹಿರೇಕೋಡಿ ಜೈನ ಮುನಿ ಹತ್ಯೆ ವಿಚಾರ ಮುಗಿದು ಹೋದ ಅಧ್ಯಾಯ. ಹಿಂದೆ ಸಿಬಿಐ ತನಿಖೆ ಮಾಡಿದ್ದ ವರದಿ ಏನು ಬಂದಿವೆ ಎಂದು ಗೊತ್ತಿದೆಯಲ್ಲವೇ..? ಸರಿಯಾದ ರೀತಿಯಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಅವರ ಸ್ವಾಮೀಜಿಗಳು ಹೇಳುತ್ತಿದ್ದಾರೆ. ಇನ್ನೂ ಇವರ ಮಾತು ಕೇಳೋಣ ಅಥವಾ ಅವರ ಮಾತು ಕೇಳೋಣ ಎಂದು ಬಿಜೆಪಿಗೆ ಸತೀಶ ಜಾರಕಿಹೊಳಿ ತಿರುಗೇಟು ನೀಡಿದರು.
28 ರಾಜ್ಯ ಹೆದ್ದಾರಿ ಮೇಲ್ದರ್ಜೆಗೆ:ಶ್ರೀರಂಗಪಟ್ಟಣ–ಬೀದರ್ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಆಗಬೇಕಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಾಡಬೇಕಿದೆ. 38 ಹೆದ್ದಾರಿ ಯೋಜನೆಗಳು ಬಾಕಿ ಉಳಿದಿವೆ. ಈ ಪೈಕಿ 28 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕಿದೆ. ಇತ್ತೀಚೆಗೆ ನವದೆಹಲಿಗೆ ಭೇಟಿ ನೀಡಿದ ವೇಳೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದೇವೆ. 15 ದಿನಗಳ ಒಳಗೆ ಸಭೆ ನಡೆಸಿ ಬಾಕಿಯಿರುವ ಯೋಜನೆಗಳನ್ನು ಪೂರ್ಣಗೊಳಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಗೋವಾಕ್ಕೆ ಸಂಪರ್ಕ ಕಲ್ಪಿಸುವ ಬೆಳಗಾವಿ–ಖಾನಾಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಟೋಲ್ ಶುಲ್ಕ ಸಂಗ್ರಹಿಸುತ್ತಿರುವುದಕ್ಕೆ ಜನರಿಂದ ವಿರೋಧ ವ್ಯಕ್ತವಾಗಿರುವ ಕುರಿತು ಪ್ರತಿಕ್ರಿಯಿಸಿದ ಸತೀಶ , ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ ವಿಷಯ. ಎಷ್ಟು ಪ್ರಮಾಣದ ಕಾಮಗಾರಿಯಾಗಿದೆ, ಅಷ್ಟಕ್ಕೆ ಮಾತ್ರ ಟೋಲ್ ಶುಲ್ಕ ಸಂಗ್ರಹಿಸುವಂತೆ ಅವರಿಗೆ ಸೂಚಿಸಲಾಗುವುದು ಎಂದು ಹೇಳಿದರು.
ಬೆಳಗಾವಿಯಲ್ಲಿ ಎರಡು ಬಸ್, ಒಬ್ಬರೇ ಕಂಡಕ್ಟರ್: ಸಚಿವ ಸತೀಶ ಹಾಸ್ಯ..!:ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳನ್ನು ನಾವು ಒಂದು ಬಸ್ ನಿಂದ ಇಳಿಸಿ ವರ್ಗಾವಣೆ ಮಾಡಿದ್ದೆವು. ಆದರೆ ಜಾತಿ, ಧರ್ಮ ಮತ್ತಿತರ ಪ್ರಭಾವ ಬಳಸಿ ನಮ್ಮ ಪಕ್ಷದ ನಾಯಕರನ್ನೇ ಹಿಡಿದುಕೊಂಡು ಹಿಂದಿನ ಬಸ್ ಹತ್ತಿ ಬಂದಿದ್ದಾರೆ. ಬೆಳಗಾವಿಯಲ್ಲಿ ಒಬ್ಬರೇ ಕಂಡಕ್ಟರ್ ಇದ್ದಾರೆ. ಆದರೆ, ಎರಡು ಬಸ್‌ಗಳಿವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹಾಸ್ಯಚಟಾಕಿ ಹಾರಿಸಿದರು.
ಮಹಾನಗರ ಪಾಲಿಕೆಯಲ್ಲಿ ಕೆಲವು ಅಧಿಕಾರಿಗಳನ್ನು ನಾವು ವರ್ಗಾಯಿಸಿದ್ದೆವು. ಆದರೆ, ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ ಬೆಳಗಾವಿಯಲ್ಲೇ ಮತ್ತೆ ಬೇರೆ ಬೇರೆ ಇಲಾಖೆಗಳಿಗೆ ಬಂದಿದ್ದಾರೆ ಎಂದ ಅವರು, ಬುಡಾ, ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಡಿ ಅಕ್ರಮ ನಡೆದಿದೆ ಎನ್ನಲಾದ ಆರೋಪ ಕುರಿತು ಅಧಿಕಾರಿಗಳ ಮಟ್ಟದಲ್ಲಿ ತನಿಖೆ ನಡೆಸುವಂತೆ ಸರ್ಕಾರ ಸೂಚನೆ ಕೊಟ್ಟಿದೆ. ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಅದು ಬೆಂಗಳೂರಿನಿಂದ ಬಂದು ತನಿಖೆ ನಡೆಸಲಿದೆ. ಒಂದು ವೇಳೆ ಅಕ್ರಮ ನಡೆದಿರುವುದು ಸಂಶಯ ವ್ಯಕ್ತಪಡಿಸಿದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟೀಕರಣ ನೀಡಿದರು.
ಬೆಳಗಾವಿಯ ತಿನಿಸು ಕಟ್ಟೆ ನಿರ್ಮಿಸಿದ ಜಾಗ ಒಬ್ಬರದ್ದು. ಬೇರೆ ಬೇರೆ ಇಲಾಖೆಯವರು ಅದನ್ನು ನಿರ್ಮಿಸಿದ್ದಾರೆ. ತರಾತುರಿಯಲ್ಲಿ 30 ವರ್ಷಗಳ ಅವಧಿಗೆ ಅದನ್ನು ಲೀಸ್ ಕೊಡಲಾಗಿದೆ. ವ್ಯಾಪಾರಿ ಮಳಿಗೆಗಳಿಗೆ ಕಡಿಮೆ ಬಾಡಿಗೆ ಮೊತ್ತ ನಿಗದಿಗೊಳಿಸಲಾಗಿದೆ. ಇವೆಲ್ಲ ಅಂಶಗಳ ಕುರಿತು ತನಿಖೆ ನಡೆಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ನೇಮಿಸಿದ್ದೇವೆ. ಅವರು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರದ ಕೆಲವೆಡೆ ಯಾರೇ ವಿರೋಧಿಗಳಿದ್ದಾರೆ, ಅವರ ಮನೆ, ಕಾರ್ಖಾನೆಗಳು ಮತ್ತು ವ್ಯಾಪಾರಿ ಮಳಿಗೆಗಳನ್ನೇ ನೆಲಸಮಗೊಳಿಸಿ, ನಕ್ಷೆಯನ್ನೇ ಬದಲಿಸಿ ರಸ್ತೆ ನಿರ್ಮಿಸಿದ್ದಾರೆ. ಆ ಬಗ್ಗೆ ಗಮನಕ್ಕೆ ಬಂದಿದ್ದು, ಒಂದೊಂದೇ ಅಕ್ರಮದ ಬಗ್ಗೆ ಪರಿಶೀಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಸರ್ಕಾರದವರು ಘೋಷಿಸಿದ್ದ 660 ಘೋಷಣೆಗಳಲ್ಲಿ 30 ಮಾತ್ರ ಈಡೇರಿಸಿದ್ದಾರೆ. ಇಲ್ಲಿ ಅಗತ್ಯವಿರುವ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯನ್ನು ನಾವು ಬೆಳಗಾವಿಗೆ ತರುತ್ತೇವೆ. ಅವರು ರೂಪಿಸಿದ್ದ ಯೋಜನೆಗಳ ಪೈಕಿ ಉತ್ತಮವಾಗಿರುವ ಕೆಲವನ್ನು ಮುಂದುವರಿಸುತ್ತೇವೆ ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಹಲಗಾ ಮಚ್ಛೆ ಬೈಪಾಸ್ ರಸ್ತೆ:ತಾಲೂಕಿನ ಹಲಗಾ – ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ವಿಚಾರವಾಗಿ ತಲೆದೋರಿದ್ದ ಕಾನೂನು ತೊಡಕುಗಳು ಬಗೆಹರಿದಿವೆ. ತಾಂತ್ರಿಕ ಕಾರಣಕ್ಕೆ ಕಾಮಗಾರಿ ಅರ್ಧಕ್ಕೆ ಕೈಬಿಟ್ಟಿದ್ದ ಗುತ್ತಿಗೆದಾರರಿಂದಲೇ ಇದನ್ನು ಮುಂದುವರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತಿಳಿಸಿದ್ದೇವೆ.
ಈ ಬಗ್ಗೆ ದೆಹಲಿ ಮಟ್ಟದಲ್ಲಿ ನಿರ್ಧಾರವಾಗಬೇಕಿದೆ. ಇನ್ನು ಬೆಳಗಾವಿಗೆ ರಿಂಗ್ ರಸ್ತೆ ಮಂಜೂರಾಗಿದೆ. ಭೂಸ್ವಾಧೀನ ಮತ್ತು ಸಮೀಕ್ಷೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದನ್ನು ತಡೆಹಿಡಿಯಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆ. ರೈತರಿಗೆ ಏನೇ ಸಮಸ್ಯೆಗಳಿದ್ದರೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬಗೆಹರಿಸುತ್ತಾರೆ. ಹಿಂದಿನ ಸರ್ಕಾರದ ಅವಧಿಯಲ್ಲೇ ಯೋಜನೆಯಾಗಿದೆ. ಅದನ್ನು ವಿರೋಧಿಸುವುದು, ಪ್ರತಿಭಟಿಸುವುದರಲ್ಲಿ ಅರ್ಥವಿಲ್ಲ. ಇದು ನಮ್ಮ ಯೋಜನೆಯಲ್ಲ ಎಂದು ನಾವು ವಿರೋಧಿಸಬೇಕು. ಆದರೆ, ನಾವೇ ಸುಮ್ಮನಿದ್ದೇವೆ ಎಂದರು.
ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವ :ಸಂಗಮ್ ಹೋಟೆಲ್‌ನಿಂದ ಕೇಂದ್ರೀಯ ಬಸ್ ನಿಲ್ದಾಣ, ಅಶೋಕ ವೃತ್ತದಿಂದ ರಾಣಿ ಚನ್ನಮ್ಮನ ವೃತ್ತದವರೆಗೆ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ತಾಂತ್ರಿಕವಾಗಿ ಎಲ್ಲಿ ಅನುಕೂಲವಿದೆಯೇ ಅಲ್ಲಿ ಕಾಮಗಾರಿ ಮಾಡುತ್ತಾರೆ. ಇನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದೆ. ಅದಕ್ಕೆ ವೈದ್ಯಕೀಯ ಉಪಕರಣಗಳಿಗಾಗಿ 150 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದ್ದಾರೆ. ಶೀಘ್ರ ಅವುಗಳನ್ನು ಪೂರೈಸುತ್ತೇವೆ. ಬಿಮ್ಸ್‌ನಲ್ಲಿರುವ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.
ನಾವು ಹಿಂದೆ ಅಧಿಕಾರದಲ್ಲಿದ್ದಾಗ, ಜಲಾಶಯಗಳಲ್ಲಿ ಐದಾರು ಟಿಎಂಸಿ ಅಡಿ ನೀರನ್ನಾದರೂ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದೆವು. ಆದರೆ, ಈ ಸಲ ಹೆಚ್ಚಿನ ಪ್ರಮಾಣದಲ್ಲಿ ನೀರು ಖಾಲಿಯಾಗಿದೆ. ಹೆಚ್ಚಿನ ನೀರು ಬಿಡುಗಡೆಗೊಳಿಸುವಲ್ಲಿ ಅಧಿಕಾರಿಗಳ ಪಾತ್ರವೇನಿಲ್ಲ. ಹಿಂದಿನ ಸರ್ಕಾರದ ಆದೇಶದಂತೆ ಅವರು ನಡೆದುಕೊಂಡಿದ್ದಾರೆ. ಈಗ ಜಲಾಶಯಗಳಿಗೆ ನೀರು ಬರುತ್ತಿದೆ. ಮುಂದಿನ ಸಲ ಇಂತಹ ಪರಿಸ್ಥಿತಿ ತಲೆದೋರದಂತೆ ಈಗಿನಿಂದಲೇ ಕ್ರಮ ವಹಿಸುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಸಂಸತ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಕುರಿತು ಸಚಿವ ಸಂತೋಷ್ ಲಾಡ್ ಹೇಳಿದ್ದೇನು?