ಬೆಳಗಾವಿ: ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಅಣ್ಣಾಮಲೈ ಅವರು ರಾಜಕೀಯ ಕ್ಷೇತ್ರದಲ್ಲಿ ಕೂಡ ಯಶಸ್ಸು ಕಾಣಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅಣ್ಣಾಮಲೈ ಒಳ್ಳೆಯ ಅಧಿಕಾರಿಯಾಗಿದ್ದರು. ಅಣ್ಣಾಮಲೈ ಅವರನ್ನು ಬಹಳ ಸಮೀಪದಿಂದ ನೋಡಿದ್ದೇನೆ. ಅವರಿಗೆ ಸಮಾಜ ಸೇವೆ ಮಾಡುವ ಅಭಿಲಾಷೆ ಇತ್ತು. ಈ ಕಾರಣಕ್ಕೆ ಒಳ್ಳೆಯ ಅಧಿಕಾರಿ ಎಂಬ ಹೆಸರು ಮಾಡಿದ್ದರೂ ಅಣ್ಣಾಮಲೈ ಇಲಾಖೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಪಕ್ಷ ಅಣ್ಣಾಮಲೈಗೆ ತಮಿಳುನಾಡಿನ ಉಸ್ತುವಾರಿವಹಿಸಿದೆ. ರಾಜಕೀಯ ಕ್ಷೇತ್ರದಲ್ಲಿ ಕೂಡ ಅಣ್ಣಾಮಲೈ ಯಶಸ್ಸು ಕಾಣಲೆಂದು ಶುಭ ಹಾರೈಸುತ್ತೇನೆ ಎಂದರು.
ಅಂತಾರಾಜ್ಯ ಬಸ್‌ಗಳ ಸೇವೆ ಆರಂಭಿಸಲು ಅನೇಕ ರಾಜ್ಯಕ್ಕೆ ಪತ್ರ ಬರೆದಿದ್ದೇವೆ. ಆಂಧ್ರ ಪ್ರದೇಶದಿಂದ ಅಂತಾರಾಜ್ಯ ಬಸ್ ಸೇವೆ ಆರಂಭಕ್ಕೆ ಒಪ್ಪಿಗೆ ಬಂದಿದೆ. ಶೀಘ್ರವೇ ಆಂಧ್ರ ಪ್ರದೇಶ-ಕರ್ನಾಟಕ ಮಧ್ಯೆ ಬಸ್ ಸಂಚಾರ ಪ್ರಾರಂಭ ಮಾಡುತ್ತೇವೆ. ತೆಲಂಗಾಣ, ಗೋವಾ, ತಮಿಳುನಾಡು ರಾಜ್ಯದಿಂದ ನಮಗೆ ಇನ್ನೂ ಒಪ್ಪಿಗೆ ಬರಬೇಕು. ಮಹಾರಾಷ್ಟ್ರದಲ್ಲಿ ಕೊರೊನಾ ತೀವ್ರತೆ ಇರುವುದರಿಂದ ಬಸ್ ಸಂಚಾರ ಆರಂಭದ ಬಗ್ಗೆ ಕೇಳಿಲ್ಲ. ಮಹಾರಾಷ್ಟ್ರ ರಾಜ್ಯಕ್ಕೆ ಬಸ್‌ಗಳನ್ನು ಓಡಿಸುವ ಬಗ್ಗೆ ಇನ್ನೂ ಚಿಂತನೆ ಮಾಡಿಲ್ಲ ಎಂದು ತಿಳಿಸಿದರು.
ಸಾರಿಗೆ ಇಲಾಖೆ ವತಿಯಿಂದ ಕೋರಿಯರ್ ಸೇವೆ ಆರಂಭಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಕೋರಿಯರ್ ಸೇವೆ ಆರಂಭವಾಗಲಿದೆ. ಈವರೆಗೆ ಖಾಸಗಿಯವರೇ ಕೋರಿಯರ್ ಸರ್ವೀಸ್ ಮಾಡುತ್ತಿದ್ದರು. ನಮ್ಮ ಸಾರಿಗೆ ಬಸ್‌ಗಳು ಪ್ರತಿಯೊಂದು ಹಳ್ಳಿಗೂ ಹೋಗುತ್ತವೆ. ಖಾಸಗಿಯವರು ಏನು ಆದಾಯ ಮಾಡಿಕೊಳ್ಳುತ್ತಿದ್ದರು ಅದು ಸರ್ಕಾರಕ್ಕೆ ಬರಲಿ ಎಂಬ ವಿಚಾರ ನಮ್ಮದು. ಇದರಿಂದ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಎಂದರು.