ಬೆಳಗಾವಿ:ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕಳೆದ ಶುಕ್ರವಾರವೇ ಶಾಸಕ ಅನಿಲ್ ಬೆನಕೆ ಅವರಲ್ಲಿ ಕೊರೊನಾ ಗುಣಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ಕಳೆದ ನಾಲ್ಕು ದಿನಗಳಿಂದ ಸೆಲ್ಫ್ ಕ್ವಾರಂಟೈನ್ ಆಗಿದ್ದರು. ಶಾಸಕರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರ ವರದಿ ಜಿಲ್ಲಾಡಳಿತ ಕೈ ಸೇರಿದ್ದು, ಶಾಸಕರಿಗೆ ಸೋಂಕು ಇರುವುದು ದೃಢಪಟ್ಟಿದೆ.
ನಿನ್ನೆ ಶಾಸಕ ಅನಿಲ್ ಬೆನಕೆ ಅವರ ಜನ್ಮದಿನವಿತ್ತು. ಆದರೂ ಶಾಸಕರು ಸಾರ್ವಜನಿಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ದೂರ ಉಳಿದು ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು. ಅಲ್ಲದೆ ಶುಕ್ರವಾರ ಬೆಳಗ್ಗೆ ಕಾಡಾ ಕಚೇರಿಯಲ್ಲಿ ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವ ಸುರೇಶ್ ಅಂಗಡಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಬಳಿಕ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು.
ಬಿಮ್ಸ್ ಆಸ್ಪತ್ರೆಯ ಮತ್ತೋರ್ವ ವೈದ್ಯನಿಗೂ ಕೊರೊನಾ ದೃಢವಾಗಿದೆ. ಆರ್ಥೋಪೇಡಿಕ್ ವಾರ್ಡ್‌ನಲ್ಲಿ ಕೆಲಸ ಮಾಡ್ತಿದ್ದ 23 ವರ್ಷದ ವೈದ್ಯನಿಗೆ ಕೊರೊನಾ ಸೋಂಕು ತಗುಲಿದೆ. ಬೆಳಗಾವಿಯ ಖಾಸಗಿ ಆಸ್ಪತ್ರೆಯ ಕೋವಿಡ್ ವಾರ್ಡ್‌ಗೆ ಸೋಂಕಿತ ವೈದ್ಯ ಶಿಫ್ಟ್ ಆಗಿದ್ದಾರೆ. ಈವರೆಗೂ ಬಿಮ್ಸ್ ಆಸ್ಪತ್ರೆಯ 8 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು ಕೊರೊನಾ ಮಹಾಸ್ಫೋಟವಾಗುವ ಸಾಧ್ಯತೆ ಇದೆ. ಇಂದು ಒಂದೇ ದಿನ 50ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ದೃಢವಾಗಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.