ಕರ್ನಾಟಕ

karnataka

ETV Bharat / state

ಬೆಳಗಾವಿ: ಅಂಗನವಾಡಿ ಕಟ್ಟಡಗಳ ಬಾಡಿಗೆ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಕಾರ್ಯಕರ್ತೆಯರ ಪ್ರತಿಭಟನೆ - ಬಾಕಿ ಹಣ ಬಿಡುಗಡೆ

ಅಧಿಕಾರಿಗಳು ಬಾಡಿಗೆ ಕಟ್ಟಡ ಪಡೆದು ಅಂಗನವಾಡಿ ಕೇಂದ್ರ ನಡೆಸುವಂತೆ ಅಧಿಕಾರಿಗಳು ಸೂಚಿಸಿದ್ದರು.ಅವರ ಭರವಸೆ ಮೇರೆಗೆ ಗುಡಿ ಗುಂಡಾರಗಳಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದು, 15 ತಿಂಗಳಿನಿಂದ ಇಲಾಖೆಯಿಂದ ಬಾಡಿಗೆ ಹಣ ಬಂದಿಲ್ಲ. ಇದರಿಂದ ಕಟ್ಟಡ ಮಾಲೀಕರು ಜಾಗ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದರು.

Anganwadi workers protest in Belgaum
ಬೆಳಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ

By

Published : Aug 2, 2023, 7:07 PM IST

ಬೆಳಗಾವಿ: 15 ತಿಂಗಳಿನಿಂದ ಬಾಕಿಯಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

1975ರಲ್ಲಿ ಪ್ರಾರಂಭವಾದ ICDS ಯೋಜನೆಯಡಿ ಸುಮಾರು 30 ರಿಂದ 40 ವರ್ಷಗಳಿಂದ ಗೌರವಧನದ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂಗನವಾಡಿ ನೌಕರರ ಜೀವನ ಕಷ್ಟಕರವಾಗಿದೆ. ಗರ್ಭಿಣಿ, ಬಾಣಂತಿಯರ ಆರೈಕೆ, 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವುದು, ಪೌಷ್ಟಿಕ ಆಹಾರ ನೀಡುವುದಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಆದರೆ ಕಳೆದ ಹಲವಾರು ವರ್ಷಗಳಿಂದ ಸರ್ಕಾರದ ಹಲವಾರು ಯೋಜನೆಗಳಲ್ಲಿ ಅಂಗನವಾಡಿ ನೌಕರರನ್ನು ದುಡಿಸಿಕೊಳ್ಳುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ ಕೆಲಸದಿಂದ ತೆಗೆದು ಹಾಕುತ್ತೇವೆಂದು ಅಧಿಕಾರಿಗಳು ಹೆದರಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಸ್ವಂತ ಕಟ್ಟಡವಿಲ್ಲದ ಕಾರಣ ಗುಡಿ ಗುಂಡಾರಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿದ್ದವು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಾಗ ಬಾಡಿಗೆ ಕಟ್ಟಡ ಪಡೆದು ಅಂಗನವಾಡಿ ಕೇಂದ್ರ ನಡೆಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಆ ಪ್ರಕಾರ ಬಾಡಿಗೆ ಕಟ್ಟಡದಲ್ಲಿ ಕೇಂದ್ರ ನಡೆಸುತ್ತಿದ್ದೆವು. ಆದರೆ ಕಳೆದ 15 ತಿಂಗಳಿನಿಂದ ಇಲಾಖೆಯಿಂದ ಬಾಡಿಗೆ ಹಣ ಬಂದಿಲ್ಲ. ಇದರಿಂದ ಕಟ್ಟಡ ಮಾಲೀಕರು ಜಾಗ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ದುಡ್ಡು ಬಂದ ಮೇಲೆ ಕೊಡುವುದಾಗಿ ಎಂದು ದಬಾಯಿಸುತ್ತಾರೆ. ಇದರಿಂದ ನಮಗೆ ಬಹಳಷ್ಟು ತೊಂದರೆಯಾಗುತ್ತಿದೆ. ತಕ್ಷಣ ಬಾಡಿಗೆ ಹಣ ಬಿಡುಗಡೆಗೊಳಿಸುವಂತೆ ಸಿಐಟಿಯು ಜಿಲ್ಲಾಧ್ಯಕ್ಷೆ ದೊಡ್ಡವ್ವ ಪೂಜಾರಿ ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ. ಎಂ. ಜೈನೇಖಾನ್ ಮಾತನಾಡಿ, ಇತ್ತೀಚೆಗೆ ಬೆಳಗಾವಿಯ ದರ್ಬಾರ್ ಗಲ್ಲಿಯ ಅಂಗನವಾಡಿ ಕಾರ್ಯಕರ್ತೆ ಶಬಾನಾ ಎಂಬುವವರು ತಮ್ಮ ಕೊರಳಲ್ಲಿನ ಚಿನ್ನದ ಮಾಂಗಲ್ಯದ ಸರ ಒತ್ತೆ ಇಟ್ಟು ಬಾಡಿಗೆ ಹಣ ಕೊಟ್ಟಿದ್ದರು. ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜಿಲ್ಲೆಯಲ್ಲೇ ಈ ರೀತಿ ಘಟನೆ ನಡೆದಿರುವುದು ನಿಜಕ್ಕೂ ದೊಡ್ಡ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಪದಾಧಿಕಾರಿಗಳಾದ ಗೋಧಾವರಿ ರಾಜಾಪುರೆ, ಮಂದಾ ನೇವಗಿ, ಸಂಧ್ಯಾ ಕುಲಕರ್ಣಿ, ಮೀನಾಕ್ಷಿ ದಪಡೆ, ಸರಸ್ವತಿ ಮಾಳಶೆಟ್ಟಿ, ರೇಣುಕಾ ರೇಣುಕೆಗೌಡರ, ವಿಜಯಾ ಕಲಾದಗಿ ಸೇರಿ ಮತ್ತಿತರರು ಇದ್ದರು.

ಇದನ್ನೂಓದಿ:ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ಹಣ ಪಡೆದ ಆರೋಪ.. ಸಂಡೂರಲ್ಲಿ ಎಫ್​ಐಆರ್​ ದಾಖಲು

ABOUT THE AUTHOR

...view details