ಕರ್ನಾಟಕ

karnataka

ETV Bharat / state

ಅಮೂಲ್​ನಲ್ಲಿ ನಂದಿನಿ‌ ವಿಲೀನ ಆಗುವುದಕ್ಕೆ ನಾವು ಬಿಡಲ್ಲ: ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ - 50 ಲಕ್ಷ ಮತದಾರರು ಸಂಬಂಧ

ಅಮೂಲ್ ನಂದಿನಿ ಜೊತೆಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಕೆಎಂಎಫ್​ನೊಂದಿಗೆ 50 ಲಕ್ಷ ಮತದಾರರ ಸಂಬಂಧವಿದ್ದು ರಾಜಕೀಯ ದುರುದ್ದೇಶದಿಂದ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ: ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಆರೋಪ.

KMF President Balachandra Jarakiholi spoke at the press conference.
ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By

Published : Apr 11, 2023, 6:09 PM IST

ಬೆಳಗಾವಿ:ಯಾವುದೇ ಕಾರಣಕ್ಕೂ ಅಮೂಲ್ ನಲ್ಲಿ ನಂದಿನಿ ವಿಲೀನ ಆಗುವುದಿಲ್ಲ. ಅದಕ್ಕೆ ನಾವು ಅವಕಾಶ ಮಾಡಿ ಕೊಡಲ್ಲ. ನಂದಿನಿಗಾಗಿ ಎಂತಹ ಹೋರಾಟ ಮಾಡುವ ಪರಿಸ್ಥಿತಿ ಬಂದರೂ ನಾವು ಸಿದ್ಧರಿದ್ದೇವೆ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಸ್ಪಷ್ಟಪಡಿಸಿದರು. ಮಂಗಳವಾರ ಬೆಳಗಾವಿಯ‌ ಖಾಸಗಿ ಹೊಟೇಲ್​ನಲ್ಲಿ‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ತಿಂಗಳ ಹಿಂದೆ ಮಂಡ್ಯಕ್ಕೆ ಅಮಿತ್ ಷಾ ಅವರು ಆಗಮಿಸಿದ್ದ ವೇಳೆ ಅಮೂಲ್ ಮತ್ತು ನಂದಿನಿ ಎರಡೂ ಜತೆಯಾಗಿ ಹೋದರೆ ರೈತರು ಮತ್ತು ಗ್ರಾಹಕರಿಗೆ ಅನುಕೂಲ‌ ಆಗುತ್ತದೆ ಎಂದು ಹೇಳಿದ್ದರು.

ಕೆಎಂಎಫ್ ತೀರ್ಮಾನ ಸುಪ್ರೀಂ :ಅದಾದ ಬಳಿಕ ಈಗ ಒಂದು ವಾರದಿಂದ ರಾಜ್ಯದಲ್ಲಿ ಅಮೂಲ್ - ನಂದಿನಿ‌ ಗಲಾಟೆ ಶುರುವಾಗಿದೆ. ಕೆಎಂಎಫ್ ತೀರ್ಮಾನವೇ ಸುಪ್ರೀಂ. ವಿಲೀನಕ್ಕೆ ಅವಕಾಶ ಕೊಡಲ್ಲ. ಅಮೂಲ್ ಸೇರಿ ಯಾವುದೇ ಕಂಪನಿ ಬಂದರೂ ನಂದಿನಿ ಜೊತೆಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ನಂದಿನಿ ಹೇಗೆ ಉಳಿಸಬೇಕು, ಬೆಳೆಸಬೇಕು ಎಂಬುದು ಗೊತ್ತಿದೆ. ಹೀಗಾಗಿ ರಾಜ್ಯದಲ್ಲಿ ಅಮೂಲ್ ಮತ್ತು ನಂದಿನಿ ವಿಚಾರವನ್ನು ಇಲ್ಲಿಗೆ ಕೈ ಬಿಡಬೇಕು ಎಂದು ಮನವಿ ಮಾಡಿದರು.

ಅಮಿತ್ ಷಾ, ಕೇಂದ್ರ ಸರ್ಕಾರ ಏನಾದರೂ‌ ಇಂಥ ಪ್ರಸ್ತಾವನೆ ಸಲ್ಲಿಸಿದರೆ ಅದಕ್ಕೆ ಮೊದಲು ವಿರೋಧ ಮಾಡುವವರು ನಾವೇ. ಅಮುಲ್ ಜತೆ ಯಾವುದೇ ರೀತಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಚುನಾವಣೆ ಬಂದಿರುವ ಹಿನ್ನೆಲೆ ಮತದಾರರ ತಲೆ ಕೆಡಿಸುವ ಉದ್ದೇಶದಿಂದ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

ರಾಜಕೀಯ ದುರುದ್ದೇಶದಿಂದ ವಿರೋಧಿಗಳು ಅಪಪ್ರಚಾರ:ಚುನಾವಣೆ ಮುಗಿದ ಬಳಿಕ‌ ಇದನ್ನು ಎಲ್ಲರೂ ಮರೆಯುತ್ತಾರೆ. ಕೆಎಂಎಫ್ ಜೊತೆ ಸುಮಾರು 50 ಲಕ್ಷ ಮತದಾರರು ಸಂಬಂಧ ಹೊಂದಿದೆ. ಹೀಗಾಗಿ ರಾಜಕೀಯ ದುರುದ್ದೇಶದಿಂದ ಮತದಾರರ ತಲೆ ಕೆಡಿಸುವ ಕೆಲಸವನ್ನು ವಿರೋಧಿಗಳು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ‌ ವಿರುದ್ಧ ಬಾಲಚಂದ್ರ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ನಂದಿನಿ ಹಾಲು ಪದಾರ್ಥಗಳು ಉತ್ಪಾದನೆಯಾಗಿ ಬೇರೆ ಬೇರೆ ಜಿಲ್ಲೆಗಳಿಗೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉತ್ತರ ಕರ್ನಾಟಕದಲ್ಲಿ ಒಂದು ಘಟಕ‌ ಸ್ಥಾಪಿಸುವ ಯೋಜನೆ ಹಾಕಿಕೊಂಡಿದ್ದೇವೆ. ಅಮೂಲ್ ತನ್ನ ಲಾಭಾಂಶದ ಶೇ.10ರಷ್ಟು ಪ್ರಚಾರಕ್ಕೆ ಬಳಸುತ್ತದೆ. ಬರುವ ದಿನಗಳಲ್ಲಿ ನಾವು ಕೂಡ ಹೆಚ್ಚಿನ ಪ್ರಚಾರ ಮಾಡುತ್ತೇವೆ.‌ ಅದೇ ರೀತಿ ಅಮೂಲ್ ಹಾಲಿನ ದರ ನಂದಿನಿಗಿಂತ ಹೆಚ್ಚಿದ್ದು, ನಂದಿನಿ‌ ದರ ಹೆಚ್ಚು ಮಾಡುವ ಬಗ್ಗೆಯೂ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡಿದ್ದೆ ಎಂದರು.

ಕರವೇ ಪ್ರತಿಭಟನೆ:ರಾಜ್ಯದಲ್ಲಿ ಅಮುಲ್ ಹಾಲು, ಮೊಸರು ಮಾರಾಟವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ನಗರದ ಕೆಎಂಎಫ್ ಕಚೇರಿ ಎದುರು ಪ್ರತಿಭಟಿಸಿದರು. ಅಮುಲ್ ಬ್ರ್ಯಾಂಡ್‌ನ ಹಾಲು, ಮೊಸರು, ತುಪ್ಪ, ಬೆಣ್ಣೆ ಮತ್ತಿತರ ಉತ್ಪನ್ನವನ್ನು ಸುಟ್ಟು ಹಾಕಿದರು.

ಯಾವುದೇ ಕಾರಣಕ್ಕೂ ಅಮುಲ್ ಹಾಲು ಮತ್ತು ಮೊಸರು ವ್ಯಾಪಾರಕ್ಕೆ ರಾಜ್ಯದಲ್ಲಿ ಅವಕಾಶ ನೀಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ನಂದಿನಿ ಉತ್ಪನ್ನಗಳಾದ ಪೇಡಾ, ಮಜ್ಜಿಗೆ, ಲಸ್ಸಿ ವಿತರಣೆ ಮಾಡಿದರು. ನಂದಿನಿ ಪರ ಘೋಷಣೆ ಮೊಳಗಿಸಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ‌ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂಓದಿ:ಮೋದಿ ಅವರ ಆಪ್ತ ಬಳಗದಲ್ಲಿರುವ ಅಂಬಾನಿಯ ಕಣ್ಣು ದೇಶದ ಹಾಲಿನ ಮೇಲೆ ಬಿದ್ದಿದೆ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ABOUT THE AUTHOR

...view details