ಬೆಳಗಾವಿ:18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ಬಿಜೆಪಿ, ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಆಗಮಿಸಿ ಭಾಷಣ, ರೋಡ್ ಶೋಗಳ ಮೂಲಕ ಭರ್ಜರಿ ಮತಬೇಟೆ ನಡೆಸಲಿದ್ದಾರೆ. ಶನಿವಾರ ಬೆಳಗ್ಗೆ 10.30ಕ್ಕೆ ಸವದತ್ತಿ ಪಟ್ಟಣಕ್ಕೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಪರವಾಗಿ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ. ನಂತರ 12.10ಕ್ಕೆ ಅಥಣಿ ಪಟ್ಟಣದ ಭೋಜರಾಜ ಕಾಲೇಜು ಮೈದಾನದಲ್ಲಿ ಅಥಣಿ ಕ್ಷೇತ್ರದ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಅವರ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
1.45ಕ್ಕೆ ರಾಯಭಾಗ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ದಿಗ್ಗೆವಾಡಿ ಕ್ರಾಸ್‌ವರೆಗೂ ರಾಯಬಾಗ ಕ್ಷೇತ್ರದ ಅಭ್ಯರ್ಥಿ ದುರ‍್ಯೋಧನ ಐಹೊಳೆ ಪರವಾಗಿ ಆಯೋಜಿಸಿರುವ ರೋಡ್ ಶೋನಲ್ಲಿ ಅಮಿತ್ ಶಾ ಭಾಗವಹಿಸಿ, ಮಧ್ಯಾಹ್ನ 3ಗಂಟೆಗೆ ಚಿಕ್ಕೋಡಿ ಪಟ್ಟಣದ ಆರ್.ಡಿ.ಕಾಲೇಜು ಮೈದಾನದಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದ ಅಭ್ಯರ್ಥಿ ರಮೇಶ್ ಕತ್ತಿ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ.
ಸಂಜೆ 4. 20ಕ್ಕೆ ಯಮಕನಮರಡಿ ಗ್ರಾಮದಲ್ಲಿ ಯಮಕನಮರಡಿ ಕ್ಷೇತ್ರದ ಅಭ್ಯರ್ಥಿ ಬಸವರಾಜ ಹುಂದ್ರಿ ಪರ ಪ್ರಚಾರ ಸಭೆಯಲ್ಲಿ, ಅಂತಿಮವಾಗಿ ಸಂಜೆ 5.45 ಕ್ಕೆ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಅಭ್ಯರ್ಥಿ ಡಾ ರವಿ ಪಾಟೀಲ್ ಪರವಾಗಿ ಆಯೋಜಿಸಿರುವ ರೋಡ್ ಶೋನಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ.