ಬೆಳಗಾವಿ: ಪಕ್ಷದ ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಪಕ್ಷದ ಚೌಕಟ್ಟಿನಲ್ಲಿಯೇ ಬಗೆ ಹರಿಸಿಕೊಳ್ಳುವಂತೆ ಅಮಿತ್ ಶಾ ಸೂಚನೆ ಕೊಟ್ಟಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರ ಅಸಮಾಧಾನದ ಬಗ್ಗೆ ಸಿಎಂ ಮಾತನಾಡಲಿದ್ದಾರೆ. ದೇಶದ ಗೃಹ ಮಂತ್ರಿಗಳಾದ ಅಮಿತ್ ಶಾ ಅವರು ಬಹಳ ಸ್ಪಷ್ಟವಾಗಿಯೇ ಹೇಳಿದ್ದಾರೆ. ತಾಲೂಕು ಮಟ್ಟದ ಸಮಸ್ಯೆಗಳನ್ನ ತಾಲೂಕು ಮಟ್ಟದಲ್ಲಿ, ಜಿಲ್ಲಾಮಟ್ಟದ ಸಮಸ್ಯೆಗಳು ಇದ್ರೆ ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯಮಟ್ಟದ ಸಮಸ್ಯೆಗಳೇನಾದರೂ ಇದ್ರೆ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಕುಳಿತು ಚರ್ಚಿಸಿ ಬಗ್ಗೆ ಹರಿಸಿಕೊಳ್ಳಬೇಕೆಂದು ಅಮಿತ್ ಶಾ ಖಡಕ್ ಸಂದೇಶ ಕೊಟ್ಟಿದ್ದಾರೆ. ಇದರ ಜೊತೆಗೆ ಏನೇ ಸಮಸ್ಯೆಗಳಿದ್ದರೂ ಸಂಬಂಧಿಸಿದ ಮಂತ್ರಿಗಳ ಗಮನಕ್ಕೆ ತಂದು ಬಗೆ ಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದ್ರೆ ಬಿ.ಎಸ್. ಯಡಿಯೂರಪ್ಪನವರಿಗೆ ಅಮಿತ್ ಶಾ ಅವರು ಖಾರವಾಗಿ ಮಾತನಾಡಿಲ್ಲ. ಅದು ಸತ್ಯಕ್ಕೆ ದೂರವಾದ ಮಾತು ಎಂದರು.