ಬೆಳಗಾವಿ:ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಆಚರಣೆಗೆ ಅವಕಾಶವಿದ್ದು, ಮೆರವಣಿಗೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡ ಅಂಬೇಡ್ಕರ್ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆ ಕಳೆದ ವರ್ಷ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಆಗಿಲ್ಲ. ಈ ವರ್ಷವು ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೋನಾ ವೇಗವಾಗಿ ಹಬ್ಬುತ್ತಿದೆ. ಹೀಗಾಗಿ ಬೆಳಗಾವಿ ಗಡಿ ಜಿಲ್ಲೆಯಲ್ಲಿ ಎಚ್ಚರ ವಹಿಸಬೇಕಾಗಿದೆ. ಹೀಗಾಗಿ ಈ ವರ್ಷವೂ ಸರಳ, ಸಾಂಕೇತಿಕವಾಗಿ, ಅರ್ಥಪೂರ್ಣವಾಗಿ ಅಂಬೇಡ್ಕರ್ ಜಯಂತಿಯನ್ನು ಅಂಬೇಡ್ಕರ್ ಉದ್ಯಾನದಲ್ಲಿ ಆಚರಣೆ ಮಾಡಲಾಗುವುದು ಎಂದರು.