ಬೆಳಗಾವಿ: ಗೋಕಾಕ ಪಟ್ಟಣದ ಮಹಾಂತೇಶ ನಗರದಲ್ಲಿ ಯುವಕನ ಕೊಲೆ ನಡೆದಿತ್ತು. ಈ ಕೊಲೆಯ ಆರೋಪಿಗಳೆಂದು ಅಮಾಯಕರಾದ ಸಿದ್ದಪ್ಪ ಬಬಲಿ ಕುಟುಂಬದವರನ್ನು ಬಂಧಿಸಿ ಅವರಿಂದ 15 ಲಕ್ಷ ರೂ ಹಣ ಪಡೆದಿದ್ದಾರೆ ಎಂದು ಗೋಕಾಕನ ಸಿದ್ದಪ್ಪ ಬಬಲಿ ಅಳಲು ತೋಡಿಕೊಂಡರು. ಗೋಕಾಕ ಸಿಪಿಐ ಗೋಪಾಲ್ ರಾಥೋಡ್ ಮತ್ತು ಪಿಎಸ್ಐ ಪೊಲೀಸ್ ಅಧಿಕಾರಿಗಳು ಅನ್ಯಾಯ ಮಾಡಿ ಬೆದರಿಕೆ ಹಾಕಿ 15 ಲಕ್ಷ ಹಣ ವಸೂಲಿ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಕಳೆದ ಜೂನ್ 2021ರಂದು ಗೋಕಾಕ ತಾಲೂಕಿನ ಮಹಾಂತೇಶ ನಗರ ಬಡಾವಣೆಯ ಮಾಲದಿನ್ನಿ ಕ್ರಾಸ್ ಬಳಿ ಸಂಜೆ 7ಕ್ಕೆ ಮಂಜು ಶಂಕರ ಮುರುಕಿಬಾವಿ ಎಂಬ ವ್ಯಕ್ತಿಯ ಅನುಮಾನಸ್ಪಾದವಾಗಿ ಕೊಲೆಯಾಗಿದ್ದನು. ಆದರೆ, ಬಸಪ್ಪ ರಂಗೇನಕೊಪ್ಪ ಎಂಬಾತನ ಹೇಳಿಕೆಯ ಅಧಾರದ ಮೇಲೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಮನಸೋ ಇಚ್ಚೆ ಥಳಿಸಿದ್ದಾರೆ. ನನ್ನ ಪತಿ ಸಿದ್ದಪ್ಪ ಪೊಲೀಸ್ ಠಾಣೆಗೆ ವಿಚಾರಿಸಲು ತೆರಳಿದಾಗ ಲಾಕಪ್‍ನಲ್ಲಿ ಹಾಕಿ ಅವರಿಗೂ ಥಳಿಸಿದ್ದಾರೆ ಎಂದು ರಾಯವ್ವಾ ಕಾನಟ್ಟಿ ದೂರಿದರು.
ಈ ವೇಳೆ ನನ್ನ ಮಗಳಿಗೂ ಹಾಗೂ ಕೊಲೆಯಾದ ವ್ಯಕ್ತಿಗೂ ಸಂಬಂಧ ಇದೆ ಎಂದು ಊಹಿಸಿಕೊಂಡು ವಿಠ್ಠಲ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾನೆ. ಇದಕ್ಕೂ ನಮಗೂ ಸಂಬಂದ ಇಲ್ಲ ಎಂದು ಪೊಲೀಸ್ ಠಾಣೆಗೆ ನ್ಯಾಯ ಕೇಳಲು ಹೋದರೆ ಠಾಣೆಯಿಂದ ನಿಮ್ಮ ಮಕ್ಕಳನ್ನು ಆಚೆಗೆ ತರಲು ಹಣ ಖರ್ಚಾಗುತ್ತದೆ. ಹಣದ ವ್ಯವಸ್ಥೆ ಮಾಡಿದರೆ ನಿಮ್ಮ ಮಕ್ಕಳನ್ನು ಬಿಡುವುದಾಗಿ ಗೋಕಾಕ ಸಿಪಿಐ ಮತ್ತು ಪಿಎಸ್ಐ ಹೇಳಿದ್ದರು.