ಕರ್ನಾಟಕ

karnataka

ಬೆಳಗಾವಿಯಲ್ಲಿ ಪೌರಕಾರ್ಮಿಕ ಆತ್ಮಹತ್ಯೆ.. ಗುತ್ತಿಗೆದಾರನ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರ ಆರೋಪ

By ETV Bharat Karnataka Team

Published : Sep 1, 2023, 5:57 PM IST

Updated : Sep 1, 2023, 7:01 PM IST

ಪೌರ ಕಾರ್ಮಿಕರೊಬ್ಬರು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಗಣೇಶಪುರದ ಜ್ಯೋತಿ ನಗರದ ನಿವಾಸಿ ಶಶಿಕಾಂತ ಸುಭಾಷ ದವಾಳೆ
ಗಣೇಶಪುರದ ಜ್ಯೋತಿ ನಗರದ ನಿವಾಸಿ ಶಶಿಕಾಂತ ಸುಭಾಷ ದವಾಳೆ

ಪೌರ ಕಾರ್ಮಿಕ ಮೃತಪಟ್ಟಿರುವ ಬಗ್ಗೆ ದಲಿತ ಮುಖಂಡ ಮಲ್ಲೇಶ ಚೌಗುಲೆ ಅವರು ಮಾತನಾಡಿದರು

ಬೆಳಗಾವಿ : ಪೌರ ಕಾರ್ಮಿಕ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ‌ಯ ಗಣೇಶಪುರದಲ್ಲಿ ಇಂದು ನಡೆದಿದೆ. ಜ್ಯೋತಿ ನಗರದ ನಿವಾಸಿ ಶಶಿಕಾಂತ ಸುಭಾಷ ದವಾಳೆ (26) ಸಾವಿಗೀಡಾದವರು. ಪತ್ನಿ, ನಾಲ್ವರು ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ.

"ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಶಿಕಾಂತ, ಗುತ್ತಿಗೆದಾರ ಎನ್.ಡಿ.ಪಾಟೀಲ್ ಅವರಿಂದ 80 ಸಾವಿರ ರೂ. ಸಾಲ ಪಡೆದಿದ್ದರು. ಐವತ್ತು ಸಾವಿರ ರೂ. ಸಾಲ ಮರುಪಾವತಿಸಿ 30 ಸಾವಿರ ರೂಪಾಯಿಯನ್ನು ಶೀಘ್ರದಲ್ಲೇ ಹಿಂತಿರುಗಿಸುವುದಾಗಿ ಮನವಿ ಮಾಡಿದ್ದರು. ಇದಕ್ಕೊಪ್ಪದ ಗುತ್ತಿಗೆದಾರ ಒಂದೂವರೆ ಲಕ್ಷ ರೂಪಾಯಿ ಬಡ್ಡಿ ನೀಡುವಂತೆ ಕಿರುಕುಳ ನೀಡುತ್ತಿದ್ದರು" ಎಂದು ದಲಿತ ಮುಖಂಡ ಮಲ್ಲೇಶ ಚೌಗುಲೆ ಆರೋಪಿಸಿದ್ದಾರೆ.

"ಮೂರು ತಿಂಗಳಿನಿಂದ ವೇತನವನ್ನೂ ನೀಡದೇ ಸತಾಯಿಸುತ್ತಿದ್ದರು. ಗುತ್ತಿಗೆದಾರ ಪಾಟೀಲ್ ಮತ್ತು ಸೂಪರ್​ವೈಸರ್​ ಶಂಕರ್ ಅಷ್ಟೇಕರ್ ಅವರು ನೀಡುತ್ತಿದ್ದ ಕಿರುಕುಳ ತಾಳಲಾರದೇ ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಶಶಿಕಾಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಗುತ್ತಿಗೆದಾರ ಎನ್‌.ಡಿ.ಪಾಟೀಲ್ ಮತ್ತು ಸೂಪರ್​ವೈಸರ್​ ಶಂಕರ್ ಅಷ್ಟೇರ್ ಕಾರಣ" ಎಂದು ಗಂಭೀರ ಆರೋಪ ಮಾಡಿದರು.

ಮೃತ ಪೌರಕಾರ್ಮಿಕನ ಪತ್ನಿ ಪ್ರಿಯಾಂಕಾ ಮಾತನಾಡಿ, "ಕಳೆದ ಮೂರು ತಿಂಗಳಿನಿಂದ ಗುತ್ತಿಗೆದಾರ ನಮ್ಮ ಯಜಮಾನರಿಗೆ ಪಗಾರ ಕೊಟ್ಟಿರಲಿಲ್ಲ. ಕೊಟ್ಟಿದ್ದ ಸಾಲಕ್ಕೆ ಬಡ್ಡಿ ಸೇರಿಸಿ ಸಾಲ ತೀರಿಸುವಂತೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಗಂಡನ ಸಾವಿಗೆ ನ್ಯಾಯ ಸಿಗಬೇಕು" ಎಂದು ಆಗ್ರಹಿಸಿದರು.

ಕ್ಯಾಂಪ್ ಪೊಲೀಸ್ ಠಾಣೆ ಬಳಿ ಆಗಮಿಸಿದ ಪೌರ ಕಾರ್ಮಿಕರು ಮತ್ತು ಮೃತನ ಕುಟುಂಬಸ್ಥರು ಧರಣಿ ನಡೆಸಿದರು. ಗುತ್ತಿಗೆದಾರ ಮತ್ತು ಸೂಪರ್​ವೈಸರ್​ನನ್ನು ಬಂಧಿಸಬೇಕು, ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಕ್ಯಾಂಪ್​ ಪೊಲೀಸ್​ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಲಾಗಿದೆ.

ಗ್ರಾ.ಪಂ ಕಚೇರಿಯೊಳಗೆ ಪೌರ ಕಾರ್ಮಿಕ ನೇಣಿಗೆ ಶರಣು:ಕಳೆದ 9 ತಿಂಗಳಿನಿಂದ ವೇತನ ಸಿಗದೆ ಮನನೊಂದ ಪೌರಕಾರ್ಮಿಕನೊಬ್ಬ ಗ್ರಾಮ ಪಂಚಾಯತ್‌ ಕಾರ್ಯಾಲಯದಲ್ಲೇ ನೇಣಿಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನ‌ ಕಳಲೆ ಗ್ರಾಮದಲ್ಲಿ (ಆಗಸ್ಟ್​ 4-2022) ನಡೆದಿತ್ತು. ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯತ್‌ನಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ 40 ವರ್ಷದ ರಂಗ, ಗ್ರಾಮ ಪಂಚಾಯತ್‌ನೊಳಗಿರುವ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು.

ಇದನ್ನೂ ಓದಿ:ವೇತನ ಸಿಗದೆ ಬೇಸತ್ತ ಪೌರ ಕಾರ್ಮಿಕ ಗ್ರಾಪಂ ಕಚೇರಿಯೊಳಗೇ ನೇಣಿಗೆ ಶರಣು

Last Updated : Sep 1, 2023, 7:01 PM IST

ABOUT THE AUTHOR

...view details