ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. 30 ವರ್ಷಗಳಿಂದ ಕುಟುಂಬದೊಂದಿಗೆ ಶೆಡ್ನಲ್ಲಿ ವಾಸವಿದ್ದ ವಿಕಲಚೇತನನ ಮನೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿರುವ ಆರೋಪ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದಿಂದ ತಡವಾಗಿ ಬೆಳಕಿಗೆ ಬಂದಿದೆ. ಐದು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾಡಹಗಲೇ ಬಡಿಗೆ ಕೋಲುಗಳಿಂದ ಮನೆ ಒಡೆದು ಧ್ವಂಸಗೊಳಿಸಲಾಗಿದೆ. ಉದಗಟ್ಟಿ ಗ್ರಾಮದ ಸಿದ್ದಪ್ಪ ಅಪ್ಪಯ್ಯ ತುರಬಿ (44) ವಾಸವಿದ್ದ ಪತ್ರಾಸ್ ಶೆಡ್ ಇದಾಗಿದೆ. ಆಸ್ತಿ ವಿವಾದದ ಕಲಹಕ್ಕೆ ವಿಕಲಚೇತನನ ಮನೆ ಬಲಿಯಾಗಿದೆ ಎಂದು ಸಂತ್ರಸ್ತ ಸಿದ್ದಪ್ಪ ಅಪ್ಪಯ್ಯ ತುರಬಿ ಆರೋಪಿಸಿದ್ದಾರೆ. ಸಿದ್ದಪ್ಪ ತುರಬಿ ವಾಸ ಮಾಡುತ್ತಿದ್ದ ಪತ್ರಾಸ್ ಶೆಡ್ 172 ಸರ್ವೆ ನಂಬರ್ ಸಂಬಂಧ ಕೋರ್ಟ್ನಲ್ಲಿ ಕೇಸ್ ದಾಖಲಾಗಿದೆ. ಕೇಸ್ ಇದ್ದರು ಮನೆಯಲ್ಲಿ ಯಾರು ಇಲ್ಲದಿರುವಾಗ ಮನೆಗೆ ದಾಳಿ ಮಾಡಿ, ಮನೆಯಲ್ಲಿನ ವಸ್ತುಗಳನ್ನು ಹಾಳು ಮಾಡಿದ್ದಾರೆ. ದೂರು ದಾಖಲಾದರೂ ಆರೋಪಿಗಳ ಮೇಲೆ ಕ್ರಮಕ್ಕೆ ಪೊಲೀಸರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ ಎಂದು ಸಿದ್ದಪ್ಪ ಆರೋಪ ಮಾಡಿದ್ದಾರೆ. ಉದಗಟ್ಟಿ ಗ್ರಾಮದ ಲಕ್ಷ್ಮಣ ತುರಬಿ, ಸತ್ಯಪ್ಪಾ ತುರಬಿ, ಗಣಪತಿ ತುರಬಿ, ಫಕ್ಕೀರಪ್ಪ ತುರಬಿ ಸೇರಿ 8 ಜನರ ವಿರುದ್ಧ ದೂರು ದಾಖಲಾಗಿದೆ.