ಬೆಳಗಾವಿ:ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಖಾಸಗಿ ಫೈನಾನ್ಸ್ ಕಂಪನಿ ವಿರುದ್ಧ 25 ಕೋಟಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಸಂತ್ರಸ್ತರು ಫೈನಾನ್ಸ್ ಮತ್ತು ಆಡಳಿತ ಮಂಡಳಿ ಸದಸ್ಯರ ಮನೆಗಳ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಫೈನಾನ್ಸ್ ಕಂಪನಿ ವಿರುದ್ಧ ವಂಚನೆ ಆರೋಪ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿರುವ ನವೋದಯ ಫೈನಾನ್ಸ್, ಜಗಜ್ಯೋತಿ ಸೌಹಾರ್ದ ಸಹಕಾರಿ ಸಂಘವು ಸರ್ವಜ್ಞ ಚಿಟ್ ಹೆಸರಿನಲ್ಲಿ ಅಂದಾಜು 25 ಕೋಟಿ ರೂ.ವಂಚನೆ ಮಾಡಿದ ಆರೋಪವಿದೆ. ಹೀಗಾಗಿ ವಂಚನೆಗೊಳಗಾದವರು ಫೈನಾನ್ಸ್ನ ಆಡಳಿತ ಮಂಡಳಿ ಮತ್ತು ಸದಸ್ಯರ ಮನೆಗಳ ಮುಂದೆ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಮನೆಯ ಮುಂದೆ ಬೊಬ್ಬೆಹಾಕಿ, ತಮಟೆ, ಪಾತ್ರೆಗಳನ್ನು ಬಾರಿಸಿ ಪ್ರತಿಭಟನೆ ನಡೆಸಿದ ಜನರು, ನಮ್ಮ ದುಡಿದ ಹಣ ವಾಪಸ್ ಕೊಡಿ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಫೈನಾನ್ಸ್ ಕಂಪನಿ ಸದಸ್ಯರ ಮನೆಗಳ ಮುಂದೆ ಜನರ ಪ್ರತಿಭಟನೆ ಇತ್ತ ಜನರ ಪ್ರತಿಭಟನೆಗೆ ಹೆದರಿದ ಆಡಳಿತ ಮಂಡಳಿ ಅಧ್ಯಕ್ಷ ಅಣ್ಣಪ್ಪ ಹುನಗುಂದ ಸೇರಿ ಸದಸ್ಯರು ಪರಾರಿ ಆಗಿದ್ದಾರೆ. ಗ್ರಾಹಕರು ಡೆಪಾಜಿಟ್ ಇಟ್ಟ ಹಣದಲ್ಲಿ ಆಡಳಿತ ಮಂಡಳಿ ಸದಸ್ಯರು ಬೇರೆಡೆ ಆಸ್ತಿ ಖರೀದಿಸಿದ ಆರೋಪವಿದೆ.
ಇದನ್ನೂ ಓದಿ:ಹಣ ಕಟ್ಟಿದವರಿಗೆ ಸಾಲ ನೀಡದೆ ಮೀನಮೇಷ : ಫೈನಾನ್ಸ್ ಕಂಪನಿ ವಿರುದ್ಧ ವಂಚನೆ ಆರೋಪ
ಗಂಡ ಮೃತಪಟ್ಟು ಮೂರು ವರ್ಷ ಆಗಿದೆ. ಹೆಂಡತಿ ಮಕ್ಕಳಿಗೆ ಏನಾದರೂ ಉಪಯೋಗ ಆಗಲಿ ಎಂಬ ಕಾರಣಕ್ಕೆ ನನ್ನ ಗಂಡ ಫೈನಾನ್ಸ್ನಲ್ಲಿ ಹಣ ಇಟ್ಟಿದರು. ಆದರೆ, ಈಗ ಫೈನಾನ್ಸ್ನವರು ನಾವು ಇಟ್ಟಿದ್ದ ಹಣ ವಾಪಸ್ ಕೊಡ್ತಿಲ್ಲ. ಮನೆ ನಡೆಸೋದು ಕಷ್ಟವಾಗ್ತಿದೆ. ಒಂದು ರೂಪಾಯಿ ಕೊಡ್ತಿಲ್ಲ. ಫೋನ್ ಮಾಡಿದ್ರೆ ಸಿಗ್ತಿಲ್ಲ. ಲೇಟ್ ಆಗುತ್ತೆ ಅಂತಾರೆ. ಕುಟುಂಬ ನಿರ್ವಹಣೆ ಹೇಗೆ ಮಾಡೋದು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.