ಬೆಳಗಾವಿ:ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಪ್ರಚಾರವು ಸೋಮವಾರ ಸಂಜೆ 6 ಗಂಟೆಗೆ ಅಂತ್ಯಗೊಂಡಿದ್ದು, ಯಾವುದೇ ರೀತಿಯ ಚುನಾವಣಾ ಬಹಿರಂಗ ಸಭೆ-ಸಮಾರಂಭಗಳಿಗೆ ಅವಕಾಶವಿರುವುದಿಲ್ಲ. ಯಾವುದೇ ಆತಂಕ, ಭಯವಿಲ್ಲದೆ ಆಮಿಷಕ್ಕೆ ಒಳಗಾಗದೇ ಮುಕ್ತವಾಗಿ ಹಾಗೂ ನಿರ್ಭಿತಿಯಿಂದ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಇಂದು ಮತ ಎಣಿಕೆ ಕೇಂದ್ರವಾದ ಟಿಳಕವಾಡಿಯ ಆರ್.ಪಿ.ಡಿ ಕಾಲೇಜಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ, ಮತದಾನ ಅಂತ್ಯಗೊಳ್ಳಲಿರುವ ಅವಧಿಗಿಂತ 48 ಗಂಟೆಗಳ ಮುಂಚಿನ ಅವಧಿಯಲ್ಲಿ ಬಹಿರಂಗ ಪ್ರಚಾರಕ್ಕೆ ನಿರ್ಬಂಧನೆ ಇರುತ್ತದೆ. ಆದರೆ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಅವಕಾಶವಿರುತ್ತದೆ. ಇಂದು ಸಂಜೆ 6 ಗಂಟೆಯ ಬಳಿಕ ಬಹಿರಂಗ ಪ್ರಚಾರ ಕಂಡುಬಂದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಅದೇ ರೀತಿ ಬೇರೆ ಕ್ಷೇತ್ರಗಳಿಂದ ಪ್ರಚಾರಕ್ಕೆ ಬಂದವರು ಆರು ಗಂಟೆ ನಂತರ ಅವರವರ ಊರುಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಈ ಬಗ್ಗೆ ಹೋಟೆಲ್ ಮತ್ತು ಲಾಡ್ಜ್ ಮಾಲೀಕರ ಜೊತೆ ಚರ್ಚಿಸಲಾಗಿದೆ ಎಂದರು.
ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಲ್ಲಿ 20,424 ಸೇವಾ ಮತದಾರರು ಸೇರಿದಂತೆ ಒಟ್ಟು 39,67,574 ಜನರು ಮತ ಚಲಾಯಿಸಲಿದ್ದಾರೆ. 18 ರಿಂದ 19 ವಯೋಮಾನದ 94,652 ಯುವ ಮತದಾರರು ಜಿಲ್ಲೆಯಲ್ಲಿ ದಾಖಲಾಗಿದ್ದಾರೆ. 42,761 ವಿಕಲಚೇತನ ಮತದಾರರು, 80 ವರ್ಷ ಮೇಲ್ಪಟ್ಟಿರುವ 1,00,095 ಹಾಗೂ 151 ಇತರೆ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಒಟ್ಟು 4439 ಮತಗಟ್ಟೆಗಳನ್ನು ರಚಿಸಲಾಗಿದೆ: ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಲ್ಲಿರುವ ಮತದಾರರ ಸಂಖ್ಯೆಗೆ ಅನುಗುಣವಾಗಿ 4,434 ಸಾಮಾನ್ಯ ಮತಗಟ್ಟೆಗಳು ಮತ್ತು 5 ಹೆಚ್ಚುವರಿ(ಆಗ್ಸಿಲರಿ) ಮತಗಟ್ಟೆಗಳು ಸೇರಿದಂತೆ ಒಟ್ಟು 4439 ಮತಗಟ್ಟೆಗಳನ್ನು ರಚಿಸಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ವಿಶೇಷ ವರ್ಗದ ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಜನರು ಮನೆಯಿಂದ ಮತದಾನ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ 7362 ಮತದಾರರು ಹಾಗೂ 1708 ವಿಶೇಷ ಚೇತನರು ಸೇರಿದಂತೆ ಒಟ್ಟು 9070 ಜನ ಮನೆಯಿಂದಲೇ ಮತ ಚಲಾಯಿಸಲು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಜಿಲ್ಲೆಯಲ್ಲಿ ಈ ಬಾರಿ 80 ವರ್ಷ ಮೇಲ್ಪಟ್ಟ 6975 ಹಿರಿಯ ನಾಗರಿಕರು ಮತ್ತು 1661 ವಿಶೇಷ ಚೇತನರು ಸೇರಿದಂತೆ ಒಟ್ಟು 8636 ಜನ ಮತದಾರರು ತಮ್ಮ ಮನೆಯಿಂದಲೇ ಮತ ಚಲಾಯಿಸಿದ್ದಾರೆ ಎಂದರು.
ಮುನ್ನೆಚ್ಚರಿಕೆ ಕ್ರಮ:ಒಟ್ಟು ಮತಗಟ್ಟೆಗಳ ಪೈಕಿ 300 ಸೂಕ್ಷ್ಮ (ಕ್ರಿಟಿಕಲ್) ಬೂತ್, 701 ವಲ್ನರೇಬಲ್ ಹಾಗೂ ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಿ ವಿಶೇಷ ಭದ್ರತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಾರಿಗೆ ಜಿಲ್ಲೆಗೆ ಹೊಸ ವಿದ್ಯುನ್ಮಾನ ಯಂತ್ರ (ಇವಿಎಂ)ಗಳು ಬಂದಿದ್ದು, ಎಲ್ಲ ಯಂತ್ರಗಳನ್ನು ಈಗಾಗಲೆ ಆಯಾ ತಾಲೂಕು ಕೇಂದ್ರಗಳಿಗೆ ಪೂರೈಕೆ ಮಾಡಿ ಸೂಕ್ತ ಭದ್ರತೆ ಒದಗಿಸಲಾಗಿದೆ. ಚುನಾವಣೆಯಲ್ಲಿ ಮತದಾನ ನಿರ್ವಹಣೆಗಾಗಿ ಒಟ್ಟು 21,688 ಮತ್ತು ಮತ ಎಣಿಕೆ ನಿರ್ವಹಣೆಗಾಗಿ 1,188 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಿಸಲಾಗಿದೆ.
ಸರ್ಕಾರಿ ಬಸ್ ಸಹಿತ 1400 ವಾಹನಗಳನ್ನು ಚುನಾವಣೆಗಾಗಿ ಮೀಸಲಿರಿಸಲಾಗಿದೆ. ಮತದಾನದ ಮುನ್ನಾ ದಿನವಾದ ಮಂಗಳವಾರ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮಾಸ್ಟರಿಂಗ್ ಕಾರ್ಯ ನಡೆಯಲಿದ್ದು, ಈ ಸಂದರ್ಭದಲ್ಲಿ ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಇವಿಎಂಗಳ ಸಹಿತ ಮತಗಟ್ಟೆ ಕೇಂದ್ರಗಳಿಗೆ ತೆರಳುತ್ತಾರೆ. ಜಿಲ್ಲೆಯಲ್ಲಿ ಒಟ್ಟು ತಲಾ 5,328 ಬ್ಯಾಲೆಟ್ ಯುನಿಟ್ ಮತ್ತು ಕಂಟ್ರೋಲ್ ಯುನಿಟ್ ಮತ್ತು 5,774 ವಿವಿಪ್ಯಾಟ್ ಯಂತ್ರಗಳು ಬಳಕೆಯಾಗಲಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.