ಬೆಳಗಾವಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಸತ್ಯ, ಅಹಿಂಸಾ ತತ್ವ, ಶಾಂತಿಮಂತ್ರದಿಂದ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗುವಂತೆ ಮಾಡಿರುವ ಗಾಂಧಿ ಹೋರಾಟವನ್ನು ಎಲ್ಲೆಡೆ ಗುಣಗಾನ ಮಾಡಿ ಸ್ಮರಿಸಲಾಗುತ್ತಿದೆ. ಆದರೆ, ಬಾಪೂಜಿ ಕಂಡಿದ್ದ ಸಾರಾಯಿ/ಮದ್ಯ ಮುಕ್ತ ಗ್ರಾಮಗಳ ಕನಸು ಮಾತ್ರ ಇಂದಿಗೂ ನನಸಾಗಿಲ್ಲ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿಂದು ಮಹಿಳೆಯರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಿನ್ನೆ (ಭಾನುವಾರ) ಮಧ್ಯಾಹ್ನದಿಂದ ಮದ್ಯ ನಿಷೇಧ ಆಂದೋಲನ ಕರ್ನಾಟಕ ಮತ್ತು ಗ್ರಾಮೀಣ ಕೂಲಿಕಾರರ ಸಂಘದ ಸಹಯೋಗದಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿತ್ತು. ಬೀರು ಬೇಡ, ನೀರು ಬೇಕು. ಸಾರಾಯಿ ಬೇಡ, ಶಿಕ್ಷಣ ಬೇಕು ಎಂಬ ಘೋಷಣೆಗಳನ್ನು ಮೊಳಗಿಸಿದ ಮಹಿಳೆಯರು, ರಾಜ್ಯದಲ್ಲಿ ಹೊಸದಾಗಿ 1 ಸಾವಿರ ಬಾರ್‌ಗಳನ್ನು ತೆರೆಯಲು ಮುಂದಾಗಿರುವ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮದ್ಯ ನಿಷೇಧ ಆಂದೋಲನದ ಕಾರ್ಯಕರ್ತೆ ಅನಿತಾ ಬೆಳಗಾಂವಕರ್ ಮಾತನಾಡಿ, "ಗಾಂಧೀಜಿ ಫೋಟೋಗೆ ಪೂಜೆ ಮಾಡಿ, ಅವರ ತತ್ವಗಳ ಬಗ್ಗೆ ಭಾಷಣ ಮಾಡಿ ಹಿಂಬದಿಯಲ್ಲಿ ಬಾರ್, ಮದ್ಯದಂಗಡಿಗಳಿಗೆ ಸರ್ಕಾರ ಲೈಸನ್ಸ್ ನೀಡುತ್ತಿದೆ. ಇದು ಬಾಪೂಜಿಗೆ ಮಾಡುತ್ತಿರುವ ದೊಡ್ಡ ಅಪಮಾನ. ಎಲ್ಲಿಯವರೆಗೆ ಬಾರ್ ಲೈಸನ್ಸ್ ನೀಡುವುದು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಹೋರಾಟ ಮುಂದುವರೆಸುತ್ತೇವೆ. ಈ ಸರ್ಕಾರ ಜನರನ್ನು ಸರ್ವನಾಶ ಮಾಡಲು ಹೊರಟಿದೆ" ಎಂದು ಕಿಡಿಕಾರಿದರು.