ಬೆಳಗಾವಿ :ಜಿಲ್ಲೆಯಲ್ಲಿ ಮತ್ತೆ ಮೂರು ಕೊರೊನಾ ಪ್ರಕರಣ ದೃಢಪಟ್ಟಿರುವ ಹಿನ್ನೆಲೆ ಇನ್ನಷ್ಟು ಮುನ್ನೆಚ್ಚರಿಕಾ ಕ್ರಮವನ್ನು ಬಿಗಿ ಮಾಡಲು ಸಚಿವ ಜಗದೀಶ್ ಶೆಟ್ಟರ್ ಸೂಚನೆ ನೀಡಿದ್ದಾರೆ.
ರಾಯಬಾಗ ತಾಲೂಕಿನ ಕುಡಚಿ ಸೇರಿ ಎಲ್ಲ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಇನ್ನಷ್ಟು ಬಿಗಿ ಕ್ರಮ ತೆಗೆದುಕೊಂಡು ಸಂಪೂರ್ಣ ಬಂದ್ ಮಾಡಬೇಕು. ಕುಡಚಿಯ ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ವೈದ್ಯಕೀಯ ತಪಾಸಣೆ ನಡೆಸಬೇಕು. ತಬ್ಲಿಘಿ ಜತೆ ಸಂಪರ್ಕ ಹೊಂದಿರುವವರನ್ನು ತಕ್ಷಣವೇ ಗುರುತಿಸುವ ಕೆಲಸವಾಗಬೇಕು, ಒಂದು ವೇಳೆ ಸ್ವಯಂಪ್ರೇರಣೆಯಿಂದ ಅವರು ಮುಂದೆ ಬರದಿದ್ದರೆ ಕಾನೂನು ಪ್ರಕಾರ ಬಲಪ್ರಯೋಗಿಸಿ ಅವರನ್ನು ತಕ್ಷಣವೇ ಕ್ವಾರಂಟೈನ್ನಲ್ಲಿರಿಸಬೇಕು ಎಂದಿದ್ದಾರೆ.
ಬೆಳಗಾವಿಯಲ್ಲಿ ಇನ್ನೆರಡು ದಿನಗಳಲ್ಲಿ ಪ್ರಯೋಗಾಲಯ ಆರಂಭಗೊಳ್ಳುವ ಸಾಧ್ಯತೆಗಳಿವೆ, ನಿಷೇಧಿತ ಪ್ರದೇಶಗಳಾಗಿ ಘೋಷಿಸಲಾಗಿರುವ ಹಿರೇಬಾಗೇವಾಡಿ, ಕುಡಚಿ, ಬೆಳಗುಂದಿ ಹಾಗೂ ಬೆಳಗಾವಿ ಕ್ಯಾಂಪ್ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳು ಮತ್ತು ವೈದ್ಯಕೀಯ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಬೇಕು. ಈಗಾಗಲೇ ಸೋಂಕು ದೃಢಪಟ್ಟಿರುವ 12 ಜನರ ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವವರ ಬಗ್ಗೆ ಹೆಚ್ಚಿನ ನಿಗಾವಹಿಸುವ ಮೂಲಕ ಸೋಂಕು ಮತ್ತಷ್ಟು ಹರಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಕುಡಚಿಯ ಪ್ರತಿಯೊಬ್ಬರನ್ನು ಕಡ್ಡಾಯವಾಗಿ ಕ್ವಾರಂಟೈನ್‌ರಿಸದಿದ್ದರೆ ಮುಂದೆ ಇನ್ನಷ್ಟು ವ್ಯಾಪಿಸಿ ಇಡೀ ಸಮಾಜಕ್ಕೆ ಕಂಟಕವಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.