ಬೆಳಗಾವಿ/ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಬಿಜೆಪಿ ಸದಸ್ಯರು ವಿಧಾನ ಪರಿಷತ್ ನಲ್ಲಿ ಧರಣಿ ಮುಂದುವರೆಸಿದ್ದು, ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪರಿಷತ್ ಕಲಾಪವನ್ನು 10 ನಿಮಿಷಗಳ ಕಾಲ ಸಭಾಪತಿ ಬಸವರಾಜ ಹೊರಟ್ಟಿ ಮುಂದೂಡಿಕೆ ಮಾಡಿದರು.
ಕುಂದಾನಗರಿ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೂರನೇ ದಿನದ ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ 7ನೇ ವೇತನ ಆಯೋಗ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಸದಸ್ಯರು ಧರಣಿ ಮುಂದುವರೆಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ವೈ ಎ ನಾರಾಯಣ್ ಸ್ವಾಮಿ, 7ನೇ ವೇತನ ಆಯೋಗ ಜಾರಿ ಆಗಬೇಕು ಎಂದು ಒತ್ತಾಯ ಮಾಡಿದರು, ನಿನ್ನೆ ಸಭಾನಾಯಕರು ಕೊಟ್ಟ ಉತ್ತರ ಸಮರ್ಪಕವಾಗಿಲ್ಲ. ಮುಂದೆ ರಾಜ್ಯದಲ್ಲಿ ಸಾಲು ಸಾಲು ಚುನಾವಣೆ ಇದ್ದು, 7ನೇ ವೇತನ ಆಯೋಗ ಯಾವಾಗ ಜಾರಿ ಆಗುತ್ತದೆ ಅಂತ ಹೇಳಬೇಕೆಂದು ಒತ್ತಾಯ ಮಾಡಿದರು.