ಚಿಕ್ಕೋಡಿ(ಬೆಳಗಾವಿ):ಕನ್ನಡದಜನಪ್ರಿಯ ನಟದಿ. ಪುನೀತ್ ರಾಜ್‍ಕುಮಾರ್ ಅವರ ನೇತ್ರದಾನ ಮಾಡಲಾಗಿತ್ತು. ಇದು ಅವರ ಕೋಟ್ಯಂತರ ಅಭಿಮಾನಿಗಳು ಹಾಗು ಇತರರಿಗೂ ಪ್ರೇರಣೆಯಾಗಿದೆ. ಈಗ ಪುನೀತ್ ಮೇಲಿನ ಅಭಿಮಾನದಿಂದ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪೋಷಕರು ನೇತ್ರದಾನದ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಹಾಗೂ ಪಿಯುಸಿ ಹಾಗೂ ದ್ವಿತೀಯ ವರ್ಗದ ಸುಮಾರು 85 ವಿದ್ಯಾರ್ಥಿಗಳು ಹಾಗೂ 20 ಮಂದಿ ಪೋಷಕರು ನೇತ್ರದಾನ ಮಾಡಿ ಇತರರಿಗೆ ಮಾದರಿಯಾದರು. "ಅಪ್ಪು ಅಕಾಲಿಕ ನಿಧನದ ನಂತರ ಅವರ ಕಣ್ಣುಗಳನ್ನು ನಾಲ್ವರಿಗೆ ಕಸಿ ಮಾಡಿರುವ ವಿಷಯವನ್ನು ಶಿಕ್ಷಕರು ನಮಗೆ ತಿಳಿಸಿ ಮಾನಸಿಕವಾಗಿ ಅಣಿಗೊಳಿಸಿದ್ದಾರೆ. ನಾವು ನಮ್ಮ ಪೋಷಕರ ಬಳಿ ಈ ವಿಚಾರದ ಕುರಿತು ಹೇಳಿದಾಗ ಅವರೂ ಸಹ ಅದಕ್ಕೆ ಸಹಮತಿ ಸೂಚಿಸಿದರು. ಹೀಗಾಗಿ ನಾವು ನೇತ್ರದಾನಕ್ಕೆ ಮುಂದಾದೆವು" ಎನ್ನುತ್ತಾರೆ ವಿದ್ಯಾರ್ಥಿನಿಯರು.
ಇದನ್ನೂ ಓದಿ:ಅಪ್ಪು ಪ್ರೇರಣೆ.. ಜನ್ಮದಿನದಂದು ನೇತ್ರದಾನಕ್ಕೆ ಸಹಿ ಹಾಕಿದ ಶಾಸಕ ಅಮೃತ್ ದೇಸಾಯಿ ದಂಪತಿ
"ಡಾ.ಪುನೀತ್ ರಾಜ್‍ಕುಮಾರ್ ಅವರು ತಮ್ಮ ಮರಣಾನಂತರ ನೇತ್ರಗಳನ್ನು ದಾನ ಮಾಡಿದ್ದು ನಮಗೆ ಪ್ರೇರಣೆಯಾಗಿದೆ. ಸಾವಿನ ನಂತರ ನಾಶವಾಗುವ ನಮ್ಮ ನೇತ್ರಗಳನ್ನು ದಾನ ಮಾಡಿದ್ದಲ್ಲಿ, ನಮ್ಮ ಕಣ್ಣುಗಳು ಅಂಧರ ಬಾಳಿಗೆ ಬೆಳಕಾಗುತ್ತವೆ. ಅಷ್ಟೇ ಅಲ್ಲ, ನಾವೂ ಜೀವಂತವಾಗಿರುತ್ತೇವೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ್ದರಿಂದ ತಾವಷ್ಟೇ ಅಲ್ಲ, ತಮ್ಮ ಕುಟುಂಬಸ್ಥರನ್ನೂ ಅವರು ನೇತ್ರದಾನಕ್ಕೆ ಮನವೊಲಿಸಿದ್ದಾರೆ. ಮುಂದಿನ ದಿನಗಳಲ್ಲಿ ನೇತ್ರದಾನದ ಬಗ್ಗೆ ಮನವರಿಕೆ ಮಾಡಿಕೊಡುವ ಕಾರ್ಯ ಮುಂದುವರೆಯಲಿದೆ" ಎಂದು ಪ್ರಾಧ್ಯಾಪಕ ಶ್ರೀಶೈಲ ಕೋಲಾರ ತಿಳಿಸಿದ್ದಾರೆ.