ಕುಂದಾನಗರಿಯಲ್ಲಿ ಅದ್ಧೂರಿಯಾಗಿ ನಡೆದ ಕರ್ನಾಟಕ ರಾಜ್ಯೋತ್ಸವ ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅದ್ಧೂರಿಯಾಗಿ ನೆರವೇರಿತು. ರಾಣಿ ಚನ್ನಮ್ಮ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ಯುವನಟ ನವೀನ್ ಶಂಕರ್ ಭಾಗಿಯಾದರು. ಅಭಿಮಾನಿಗಳೊಂದಿಗೆ ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಿ, ಚನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಬಳಿಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಾ, "ರಾಜ್ಯದ ಬೇರಾವುದೇ ಸ್ಥಳದಲ್ಲಿ ಆಚರಣೆ ಮಾಡುವ ರಾಜ್ಯೋತ್ಸವಕ್ಕಿಂತ ಗಡಿ ಜಿಲ್ಲೆ ಬೆಳಗಾವಿಯಲ್ಲಿನ ಸಂಭ್ರಮಕ್ಕೆ ಹೆಚ್ಚಿನ ಮಹತ್ವವಿದೆ. ಇಲ್ಲಿನ ಕನ್ನಡಿಗರ ಭಾಷಾಭಿಮಾನ ಇಡೀ ನಾಡಿಗೆ ಮಾದರಿ. ಯಾರಿಗೂ ಅಂಜದೇ, ಅಳುಕದೇ ನಮ್ಮ ಕನ್ನಡ ನಾಡಿನ ಹಬ್ಬವನ್ನು ಪ್ರತಿ ವರ್ಷವೂ ಆಚರಿಸೋಣ" ಎಂದು ಮನವಿ ಮಾಡಿದರು.
"ನಾಡು, ನುಡಿಯ ರಕ್ಷಣೆಗೆ ಮುಂಚೂಣಿಯಲ್ಲಿ ನಿಲ್ಲುವ ಗಡಿ ಭಾಗದ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ಆಗ ಮಾತ್ರ ಇಲ್ಲಿನ ಸಡಗರ ಇಮ್ಮಡಿಯಾಗಿ, ಕರ್ನಾಟಕ ರಾಜ್ಯ ನಾಮಕರಣದ ಸುವರ್ಣ ಸಂಭ್ರಮ ಸಾರ್ಥಕವಾಗುತ್ತದೆ. ಬರಗಾಲ ಲೆಕ್ಕಿಸದೇ ಇಲ್ಲಿಯ ಜನರ ಸಂಭ್ರಮ ನೋಡಿದರೆ ಬೆಳಗಾವಿಗರ ಕನ್ನಡಾಭಿಮಾನ ಎಂಥದ್ದು ಎಂದು ತಿಳಿಯುತ್ತದೆ" ಎಂದರು.
"ನಾನೂ ಈ ಭಾಗದವನೆಂದು ಇಲ್ಲಿನ ಜನ ಹೆಚ್ಚು ಪ್ರೀತಿ, ಅಭಿಮಾನ ತೋರಿಸುತ್ತಾರೆ. ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರೂ ಗುರುತಿಸಿ, ಅಭಿನಂದಿಸಿ, ಪ್ರೋತ್ಸಾಹಿಸುವುದನ್ನು ನೋಡಿ ನನಗೆ ಮತ್ತಷ್ಟು ಹುಮ್ಮಸ್ಸು ಬರುತ್ತಿದೆ. ಮುಂದಿನ ವರ್ಷವೂ ರಾಜ್ಯೋತ್ಸವ ಆಚರಿಸಲು ಬೆಳಗಾವಿಗೆ ಖಂಡಿತ ಬರುತ್ತೇನೆ" ಎಂದು ಹೇಳಿದರು.
ಬೆಳಗಾವಿಯಲ್ಲಿ ರಾಜ್ಯೋತ್ಸವ:ರಾಜ್ಯೋತ್ಸವ ಸಂದರ್ಭದಲ್ಲಿ ಯುವಕ-ಯುವತಿಯರು ಡಿಜೆ ಕನ್ನಡ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಕನ್ನಡ ಕುಲತಿಲಕ ಇಮ್ಮಡಿ ಪುಲಿಕೇಶಿ ಮಹಾರಾಜರ ಮೂರ್ತಿ ಎಲ್ಲರ ಗಮನ ಸೆಳೆಯಿತು. ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಭಾವಚಿತ್ರಗಳು ಮೆರವಣಿಗೆಯುದ್ದಕ್ಕೂ ಕಾಣಿಸಿಕೊಂಡವು.
ಕರ್ನಾಟಕ ರಾಜ್ಯೋತ್ಸವಕ್ಕೆ ನೆರೆದ ಜನಸಾಗರ ಕುಂದಾನಗರಿಯಲ್ಲಿ ಕನ್ನಡಮ್ಮನ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ರಾಜ್ಯೋತ್ಸವ ಆಚರಿಸಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಈ ಬಾರಿಯೂ ನವೆಂಬರ್ 1ರ ಮಧ್ಯರಾತ್ರಿಯಿಂದಲೇ ರಾಣಿ ಚನ್ನಮ್ಮ ವೃತ್ತದಲ್ಲಿ ಸಂಭ್ರಮಾಚರಣೆ ಆರಂಭವಾಗಿತ್ತು.
ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ಎತ್ತಿನಬಂಡಿಯಲ್ಲಿ ಭುವನೇಶ್ವರಿಯ ಪ್ರತಿಮೆ ಮೆರವಣಿಗೆ ಜರುಗಿತು. ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರಣ್ಯ ಇಲಾಖೆ, ಅಂಚೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ವಿಶೇಷವಾಗಿದ್ದವು. ಪಂಪ, ರನ್ನ, ಪೊನ್ನ, ಅಕ್ಕಮಹಾದೇವಿ, ಶ್ರೀಕೃಷ್ಣದೇವರಾಯ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಪುನೀತ್ ರಾಜ್‌ಕುಮಾರ್, ಮೈಸೂರು ಅಂಬಾರಿ, ಮೈಸೂರು ಮಹಾರಾಜ, ಯಕ್ಷಗಾನ, ದೈವದ ಕೋಲ ಸೇರಿ ನೂರಕ್ಕೂ ಅಧಿಕ ವಿವಿಧ ಬಗೆಯ ರೂಪಕಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ವಿವಿಧ ಸಂಘ ಸಂಸ್ಥೆಗಳು, ಸಮಾಜ ಸೇವಕರು ಜಿಲೇಬಿ, ಉಂಡಿ, ಬಾಳೆಹಣ್ಣು, ನೀರು ಹಾಗು ತಂಪು ಪಾನೀಯಗಳನ್ನು ವಿತರಿಸಿದರು.
ಇದನ್ನೂ ಓದಿ:ಬೆಳಗಾವಿಯಲ್ಲಿ ಸಚಿವ ಜಾರಕಿಹೊಳಿ ಧ್ವಜಾರೋಹಣ; ಕರ್ನಾಟಕ ಭಾವೈಕ್ಯತೆ ತವರು ಮನೆ ಎಂದು ಬಣ್ಣನೆ