ಬೆಳಗಾವಿ: ತಡರಾತ್ರಿ ಹರಟೆ ಹೊಡೆಯುತ್ತಾ ರಸ್ತೆಯ ಪಕ್ಕದಲ್ಲಿ ಕುಳಿತಿದ್ದ ಕಿಡಿಗೇಡಿಗಳ ಗುಂಪೊಂದು ಕೊರೊನಾ ಕಾರ್ಯದ ಮೇಲೆ ಗಸ್ತು ತಿರುಗುತಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ನಗರ ದರ್ಬಾರ್ ಗಲ್ಲಿಯಲ್ಲಿ ನಡೆದಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿರುವ ಯುವಕರ ವರ್ತನೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರ ಆರೋಗ್ಯ ಕಾಪಾಡಲು ಶ್ರಮಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಕೆಲ ಕಿಡಿಗೇಡಿಗಳ ಕೃತ್ಯಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.
ನಗರದ ಮಾರ್ಕೆಟ್ ಠಾಣೆಯ ವ್ಯಾಪ್ತಿಯಲ್ಲಿರುವ ಪೊಲೀಸರು ನಿನ್ನೆ (ಸೋಮವಾರ) ತಡರಾತ್ರಿ ನಗರದ ದರ್ಬಾರ್ ಗಲ್ಲಿಯಲ್ಲಿ ಗಸ್ತು ತಿರುಗುತ್ತಿದ್ದರು. ಈ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿ ಕುಳಿತಿದ್ದ ಕಿಡಿಗೇಡಿಗಳನ್ನ ಮನೆಗೆ ತೆರಳುವಂತೆ ಕರ್ತವ್ಯದಲ್ಲಿದ್ದ ಪೊಲೀಸರು ತಿಳಿಸಿದ್ದಾರೆ. ಆದ್ರೆ, ಪೊಲೀಸರು ಹೇಳಿದರೂ ಹೋಗದ ಯುವಕರು ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಬಳಿಕ ಪೊಲೀಸ್ ಪೇದೆಯೊಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಿದ್ದಲ್ಲದೇ ದಬ್ಬಾಳಿಕೆ ಮಾಡಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇತ್ತ ಲಾಕ್‌ಡೌನ್ ಕರ್ತವ್ಯದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಕೆಲ ಕಿಡಿಗೇಡಿಗಳ ವಿರುದ್ಧ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಪಿ ಡಾ.ವಿಕ್ರಮ ಆಮಟೆ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಯಾರು ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಆರೋಪಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು. ಲಾಕ್‌ಡೌನ್ ಸಂದರ್ಭದಲ್ಲಿ ಸಾರ್ವಜನಿಕ ತುಂಬ ಸಹಕಾರ ನೀಡಿದ್ದಾರೆ. ಆದ್ರೆ, ಕೆಲ ಕಿಡಿಗೇಡಿಗಳು ಇಂತಹ ಕೃತ್ಯ ಎಸಗಿದ್ದಾರೆ. ಲಾಕ್‌ಡೌನ್ ಪಾಲನೆ ಮಾಡೋದು ಕೋವಿಡ್ ಸೋಂಕು ತಡೆಗೆ ಎಂಬುವುದನ್ನು ಸಾರ್ವಜನಿಕರು ಅರಿಯಬೇಕು. ಅದನ್ನು ಬಿಟ್ಟು ಗಲ್ಲಿಗಳಲ್ಲಿ ಗುಂಪು ಕಟ್ಟಿ ಕುಳಿತುಕೊಂಡು ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಡಿಸಿಪಿ ಖಡಕ್ ಎಚ್ಚರಿಕೆ ನೀಡಿದರು.