ಬೆಳಗಾವಿ:ನನಗೆ ರಾಜಕೀಯ ಕಾರ್ಯದರ್ಶಿ ಅಥವಾ ವಿಧಾನಸಭೆ ಮುಖ್ಯ ಸಚೇತಕ ಸ್ಥಾನವನ್ನು ವಹಿಸಿಕೊಳ್ಳುವಂತೆ ವರಿಷ್ಠರು ಹೇಳಿದ್ರೆ ಅದನ್ನು ಒಪ್ಪೋದಿಲ್ಲ ಎಂದು ಶಾಸಕ ಅಭಯ್ ಪಾಟೀಲ್ ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ಮೇಯರ್ ಮತ್ತು ಉಪಮೇಯರ್ ಸ್ಥಾನವನ್ನು ಅಲಂಕರಿಸಲಿದ್ದಾರೆ. ಆಯೋಗದ ಮೇಯರ್ ಸ್ಥಾನದ ಕುರಿತು ನೋಟಿಫಿಕೇಶನ್ ಹೊರಡಿಸಿದ ನಂತರ ಯಾರನ್ನು ಆಯ್ಕೆ ಮಾಡಬೇಕು ಎಂಬ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ ಎಂದರು.
ಕಳೆದ ನಾಲ್ಕೈದು ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದೇವೆ. ಆಗ ಬೆಳಗಾವಿ ಪಾಲಿಕೆಗೆ ಮೇಯರ್ ಸ್ಥಾನದ ವಿಚಾರ ಪ್ರಸ್ತಾಪವನ್ನು ಮಾಡಿಲ್ಲ. ಯಾವ ಸಮುದಾಯಕ್ಕೆ ಕೊಡಬೇಕು ಎಂಬುವುದರ ಬಗ್ಗೆಯೂ ಚರ್ಚೆ ಆಗಿಲ್ಲ.
ಇದೆಲ್ಲವೂ ಬರೀ ಊಹಾಪೋಹಗಳಷ್ಟೆ. ಸದ್ಯ ನಾನು ಮತ್ತು ಉತ್ತರ ಕ್ಷೇತ್ರದ ಶಾಸಕ ಬೆನಕೆ ಬೆಳಗಾವಿ ಅಭಿವೃದ್ಧಿ ಮಾಡುವ ಅಜೆಂಡಾ ಹೊಂದಿದ್ದೇವೆ. ಮಹಾನಗರ ಜನರ ಆಸೆ ಆಕಾಂಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನಮ್ಮ ವಿರೋಧಿಗಳಿಗೆ ಅಭಿವೃದ್ಧಿ ಮೂಲಕ ಉತ್ತರ ಕೊಡುತ್ತೇವೆ ಎಂದರು.
ಇದನ್ನೂ ಓದಿ:ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವು ಸೋತಿಲ್ಲ, ಪಕ್ಷಕ್ಕೆ ಹಿನ್ನಡೆಯಾಗಿದೆ: ಡಿಕೆಶಿ