ಬೆಳಗಾವಿ : ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿ ಪ್ರಧಾನಿ ಘೋಷಣೆ ಮಾಡಿದ್ದಾರೆ. ಆದರೆ, ಕರ್ನಾಟಕದಲ್ಲಿ ಶೇ 40ರಷ್ಟು ಸರ್ಕಾರ ಇದೆ ಎಂದು ಗುತ್ತಿಗೆದಾರರು 4 ತಿಂಗಳ ಹಿಂದೆಯೇ ಪತ್ರ ಬರೆದಿದ್ದಾರೆ. ಸದ್ಯ ಶೇ 50ರಷ್ಟು ಆಗಿದೆ ಎಂದು ಪ್ರಧಾನಿಗೆ ಪತ್ರ ಬರೆಯಲು ಮುಂದಾಗಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಏನಾಗುತ್ತಿದೆ ಅನ್ನೋದು ಪ್ರಧಾನಿಗೆ ಗೊತ್ತಾಗಬೇಕಿದೆ ಎಂದು ಆಪ್ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹಸಚಿವರೇ ಸದನದಲ್ಲಿ ಪಿಎಸ್ಐ ಹಗರಣ ಆಗಿಲ್ಲ ಎಂದಿದ್ದರು. ಆದರೆ, ಪಿಎಸ್ಐ ಹಗರಣದಲ್ಲಿ ಎಡಿಜಿಪಿ ಯ್ರಾಂಕ್ ಇದ್ದ ಅಧಿಕಾರಿಯನ್ನು ಬಂಧನ ಮಾಡಿದ್ದಾರೆ. ಪರೀಕ್ಷೆ ರದ್ದು ಮಾಡಿ ಹೊಸದಾಗಿ ಪರೀಕ್ಷೆ ನಡೆಸಬೇಕು. ಕೋವಿಡ್ ಕಾಲದಲ್ಲಿ ಆರೋಗ್ಯ ಸಚಿವರ ಭ್ರಷ್ಟಾಚಾರ ಬಗ್ಗೆಯೂ ಸದನದಲ್ಲಿ ಚರ್ಚೆ ಆಗಿದೆ. ನಮ್ಮ ರಾಜ್ಯದಲ್ಲಿ ಶೇ 100ರಷ್ಟು ನಡೆದ ಪ್ರಕರಣಗಳು ಇವೆ. ಸಚಿವ ಮುನಿರತ್ನ ವಿರುದ್ಧವೂ ಕ್ರಮ ಆಗಬೇಕು ಎಂದು ಹೇಳಿದರು.
ಮಂಗಳೂರಿಗೆ ಪ್ರಧಾನಿ ಬರುತ್ತಿದ್ದು, ಈ ಬಗ್ಗೆ ಮಾತನಾಡುವ ಧೈರ್ಯ ಅವರಿಗಿದೆಯೇ? ಕರ್ನಾಟಕ ಸರ್ಕಾರಕ್ಕೆ ಒಬ್ಬ ಸಚಿವ ಮೇಲೆ ಕ್ರಮ ಕೈಗೊಳ್ಳುವ ಆತ್ಮಶಕ್ತಿ ಇದೆಯೇ ಎಂದು ಪ್ರಶ್ನಿಸಿದರು. ಅಲ್ಲದೇ ಪ್ರಧಾನಿ ಮೋದಿ ಪತ್ರಕರ್ತರ ಜೊತೆಗೆ ಮಾತನಾಡಲು ಹೆದರುತ್ತಾರೆ. ಬಿಟ್‌ಕಾಯಿನ್ ಫಲಾನುಭವಿಗಳು ಈ ಸರ್ಕಾರ ನಡೆಸುತ್ತಿದ್ದು,ಈ ಬಿಟ್‌ಕಾಯಿನ್ ಹಗರಣ ಅಂತಾರಾಷ್ಟ್ರೀಯ ಹಗರಣವಾಗಿದೆ.ಈ ಹಗರಣ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಕೇಸರಿಕರಣ ಮಾಡಲು ಧೈರ್ಯ ಇಲ್ಲ : ಕೇಸರಿ ಸರ್ಕಾರ ಅನ್ನೋ ಬಿಜೆಪಿಯವರಿಗೆ, ಕೇಸರಿಕರಣ ಮಾಡೋಕೂ ಧೈರ್ಯ ಇಲ್ಲ. ಇವರೆಲ್ಲ ಸೋಷಿಯಲ್ ಮಿಡಿಯಾ ಪೈಲ್ವಾನರು. ಸೋಷಿಯಲ್ ಮೀಡಿಯಾದಲ್ಲಿ ಗೂಂಡಾಗಳನ್ನು ಸೃಷ್ಟಿ ಮಾಡಿದ್ದಾರೆ. ಲೋಕಾಯುಕ್ತ ಬಗ್ಗೆ ಇವರು ನೀಡಿದ ವಾದ ವಿಫಲವಾಗಿದೆ. ಎಸಿಬಿ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ ಆಗಿಲ್ಲ.ಕಳೆದ 20 ದಿನಗಳಿಂದ ಭ್ರಷ್ಟಾಚಾರ ಬಗ್ಗೆ ಯಾವುದೇ ತನಿಖೆ ಆಗಿಲ್ಲ ಎಂದು ಹೇಳಿದರು.