ಸಿಸಿಟಿವಿಯಲ್ಲಿ ಸೆರೆಯಾದ ಹತ್ಯೆ ಘಟನೆಯ ದೃಶ್ಯ ಬೆಳಗಾವಿ:ಜಿಲ್ಲೆಯ ಶಿವಬಸವ ನಗರದಲ್ಲಿ ನಿನ್ನೆ(ಬುಧವಾರ) ರಾತ್ರಿ 9 ಗಂಟೆ ಸುಮಾರಿಗೆ ಹಂತಕರು ಬೈಕ್ ಮೇಲೆ ಹಿಂದಿನಿಂದ ಬಂದು ಯುವಕನ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿನ ದೃಶ್ಯ ಲಭ್ಯವಾಗಿದೆ. ಬೆಳಗಾವಿಯ ರಾಮನಗರದ ವಡ್ಡರವಾಡಿಯ ನಿವಾಸಿ ನಾಗರಾಜ ಗಾಡಿವಡ್ಡರ(26) ಕೊಲೆಯಾದ ಯುವಕ.
ಶಿವಬಸವ ನಗರದ ರಸ್ತೆಯಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತ ಹೋಗುತ್ತಿದ್ದ ನಾಗರಾಜನ ಕೊಲೆ ಮಾಡಲು ಬೈಕ್ ಮೇಲೆ ಬಂದ ಮೂವರು ಆರೋಪಿಗಳು ಹೊಂಚು ಹಾಕಿ ಕಾಯುತ್ತಿದ್ದರು. ಬೈಕ್ನ್ನು ದಾಟಿ ಮುಂದೆ ನಾಗರಾಜ ಹೋಗುತ್ತಿದ್ದಂತೆ ಹಿಂದಿನಿಂದ ಓರ್ವ ಆರೋಪಿ ಕಲ್ಲಿನಿಂದ ಜೋರಾಗಿ ತಲೆಗೆ ಹೊಡೆದಿದ್ದಾನೆ. ಹೊಡೆತದ ರಭಸಕ್ಕೆ ನಾಗರಾಜ ಅಲ್ಲಿಯೇ ಕುಸಿದು ಬಿದ್ದಿದ್ದಾನೆ.
ಬಳಿಕ ಆರೇಳು ಬಾರಿ ಮತ್ತೆ ಕಲ್ಲಿನಿಂದ ನಾಗರಾಜನ ತಲೆಗೆ ಹೊಡೆದು ಬಳಿಕ ಮೂವರು ಆರೋಪಿಗಳು ಬೈಕ್ ಮೇಲೇರಿ ಅಲ್ಲಿಂದ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ನಿನ್ನೆ ರಾತ್ರಿಯೇ ಘಟನಾ ಸ್ಥಳಕ್ಕೆ ಮಾಳಮಾರುತಿ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದರು.
ಕೊಲೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಮಾಳಮಾರುತಿ ಠಾಣೆಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇಂದು ಬೆಳಗ್ಗೆ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಅಣ್ಣ ಅತ್ತಿಗೆಯನ್ನು ಕೊಂದು ತಮ್ಮ ಪೊಲೀಸ್ ಠಾಣೆಗೆ:ಮೈಸೂರಿನ ಟಿ ನರಸೀಪುರ ತಾಲೂಕಿನ ನುಗ್ಗೆನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಮಾತು ಮತ್ತೆ ಮತ್ತೆ ಸಾಭೀತಾಗುತ್ತಿದೆ. ಕೊಪ್ಪಲು ಗ್ರಾಮದ ಸಮೀಪ ಜೀನಗುಡ್ಡ ಬಳಿ ಸುಮಾರು 170 ಎಕರೆ ಗೋಮಾಳವಿದೆ. ಅದರಲ್ಲಿ 15 ಗುಂಟೆಯಷ್ಟು ಜಾಗದಲ್ಲಿ ಮೃತ ದಂಪತಿ ಶಿವಲಿಂಗು ಮತ್ತು ಭಾರತಿ ಬೇಸಾಯ ಮಾಡಿಕೊಂಡು ಬದುಕುತ್ತಿದ್ದರು. ಶಿವಲಿಂಗು ತಮ್ಮ ಹನುಮಂತು ಆಗಾಗ ಅಣ್ಣನ ಜೊತೆ ಈ ಜಾಗದಲ್ಲಿ ನನಗೂ ಪಾಲು ಬೇಕು ಎಂದು ಜಗಳವಾಡುತ್ತಿದ್ದ.
ಇದೇ ವಿಚಾರ ಆಗಸ್ಟ್ 29 ರಂದು ಆರಂಭವಾಗಿದೆ. ಅಣ್ಣ ಅತ್ತಿಗೆ ಇಬ್ಬರು ಜಮೀನಿನಲ್ಲಿ ಕೆಲಸ ಮಾಡಲು ಬಂದಿದ್ದರು. ಇಲ್ಲಿಗೆ ಬಂದಿದ್ದ ಹನುಮಂತು ಜಗಳದ ಕ್ಯಾತೆ ತೆಗದಾಗ ದಂಪತಿ ಜಮೀನು ಕೊಡುವುದಿಲ್ಲ ಎಂದಿದ್ದಾರೆ. ಅಷ್ಟಕ್ಕೆ ಅಲ್ಲೇ ಬಿದ್ದಿದ್ದ ಗುದ್ದಲಿಯಿಂದ ಅಣ್ಣನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಜೊತೆಗೆ ತಡೆಯಲು ಬಂದ ಅತ್ತಿಗೆ ತಲೆಗೂ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಕೊಲೆ ಬಳಿಕ ಹನುಮಂತು ತಾನೇ ಪೊಲೀಸ್ ಠಾಣೆಗೆ ಕರೆ ಮಾಡಿ, ಅಣ್ಣ ಮತ್ತು ಅತ್ತಿಗೆಯನ್ನು ನಾನೇ ಕೊಲೆ ಮಾಡಿದ್ದೇನೆ ಎಂದು ಹೇಳಿ, ಸ್ವಲ್ಪ ಹೊತ್ತಿನ ಬಳಿಕ ತಾನೇ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಇದನ್ನೂ ಓದಿ:ದೇವಸ್ಥಾನದ ಸಮೀಪವೇ 93 ವರ್ಷದ ಅರ್ಚಕನ ಬರ್ಬರ ಹತ್ಯೆ!