ಬೆಳಗಾವಿ: ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಬೃಹತ್ ಕಂದಕಕ್ಕೆ ಜಾರಿಬಿದ್ದ ಯುವಕನೋರ್ವ ಪವಾಡ ಸದೃಶವಾಗಿ ಪಾರಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್ನಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ಮೂಲದ ಪ್ರದೀಪ್ ಸಾಗರ್ ಬಚಾವ್ ಆದ ಯುವಕ. 140 ಅಡಿ ಕಂದಕಕ್ಕೆ ಬಿದ್ದಿದ್ದ ಪ್ರದೀಪ್ ಸಾಗರ್ನನ್ನು ಗೋಕಾಕಿನ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ರಕ್ಷಿಸಿದ್ದಾರೆ. ನೆರವಿಗೆ ಧಾವಿಸಿದ ಆಯೂಬ್ ಖಾನ್‌ಗೆ ಪ್ರದೀಪ್ ಸಾಗರ್ ಪೋಷಕರು ಅಳುತ್ತಲೇ ಧನ್ಯವಾದ ತಿಳಿಸಿದರು.
ಕಂದಕಕ್ಕೆ ಬಿದ್ದ ಯುವಕ ಪ್ರದೀಪ್ ಸಾಗರ್ ಬೆಳಗಾವಿಯ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ಪ್ರದೀಪ್ ಸಾಗರ್, ನಿನ್ನೆ ರಜೆ ಹಿನ್ನೆಲೆಯಲ್ಲಿ ಸ್ನೇಹಿತರ ಜತೆ ಗೋಕಾಕ್ ಫಾಲ್ಸ್ಗೆ ಹೋಗಿದ್ದ. ಫಾಲ್ಸ್ ಮೇಲಿನ ಬಂಡೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸುವ ವೇಳೆ 140 ಅಡಿ ಆಳದ ಕಂದಕಕ್ಕೆ ಪ್ರದೀಪ್ ಬಿದ್ದಿದ್ದಾನೆ. ಸ್ನೇಹಿತರು ತಕ್ಷಣವೇ ಗೋಕಾಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೋಕಾಕ್ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿದ್ದರು. ಕತ್ತಲಾದ ಕಾರಣ ಕಾರ್ಯಾಚರಣೆ ಮೊಟಕುಗೊಳಿಸಿ ಸಿಬ್ಬಂದಿ ತೆರಳಿದ್ದರು.
ಕಂದಕಕ್ಕೆ ಬಿದ್ದ ಯುವಕನಿಗಾಗಿ ರಕ್ಷಣಾ ಕಾರ್ಯಾಚರಣೆ ಪ್ರದೀಪ್ ಸಾಗರ್ ಮೃತಪಟ್ಟಿದ್ದಾನೆ ಎಂದು ಸ್ನೇಹಿತರು ಹಾಗೂ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ಭಾವಿಸಿದ್ದರು. ಆದರೆ ಬೆಳಗಿನ ಜಾವ 4 ಗಂಟೆಗೆ ಪ್ರದೀಪ್ ಸ್ನೇಹಿತರಿಗೆ ಕರೆ ಮಾಡಿ, ತನ್ನ ಲೋಕೇಶನ್ ಶೇರ್ ಮಾಡಿದ್ದ. ಬಳಿಕ ಆತನ ಸ್ನೇಹಿತರು ಗೋಕಾಕ್ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್‌ಗೆ ಕರೆ ಮಾಡಿದ್ದಾರೆ.
ಕಂದಕಕ್ಕೆ ಬಿದ್ದ ಯುವಕನಿಗಾಗಿ ರಕ್ಷಣಾ ಕಾರ್ಯಾಚರಣೆ ಈ ವೇಳೆ 140 ಅಡಿ ಆಳದ ಕಂದಕಕ್ಕೆ ತೆರಳಿದ ಆಯೂಬ್ ಖಾನ್, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪ್ರದೀಪ್ ಸಾಗರ್ನನ್ನು ರಕ್ಷಿಸಿದ್ದಾರೆ. ಸದ್ಯ ಪ್ರದೀಪ್ ಸಾಗರ್, ಗೋಕಾಕ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.