ಚಿಕ್ಕೋಡಿ: ಕೊರೊನಾ ಸೋಂಕಿಗೆ ಒಳಗಾಗಿ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಸಂಪೂರ್ಣವಾಗಿ ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿ ಸ್ವಗ್ರಾಮ ಕುಡಚಿ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ತಾಲೂಕು ಆಡಳಿತದಿಂದ ಚಪ್ಪಾಳೆ ತಟ್ಟುವುದರ ಮೂಲಕ ಬರಮಾಡಿಕೊಳ್ಳಲಾಯಿತು.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಯಾಸ್ಮಿನ್ ನವಾಜ್ ಎಂಬುವರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಚಿಕಿತ್ಸೆಗಾಗಿ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೆ 150ನೇ ಸೋಂಕಿತನಿಂದ ಕೊರೊನಾ ತಗುಲಿತ್ತು.
ಚಂದ್ರಕಾಂತ ಭಜಂತ್ರಿ , ರಾಯಬಾಗ ತಹಶೀಲ್ದಾರ್ ತಾಲೂಕು ಆಡಳಿತ ಬೆಂಗಾವಲಿನೊಂದಿಗೆ ಪಟ್ಟಣಕ್ಕೆ ಆಗಮಿಸಿದ ಯಾಸ್ಮಿನ್ ನವಾಜ್ ಅವರನ್ನು ದಾರಿಯೂದಕ್ಕೂ ಚಪ್ಪಾಳೆ ತಟ್ಟುತ್ತಾ ಸ್ವಾಗತಿಸಲಾಯಿತು. ಕುಡಚಿ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದರಿಂದ ಜನರಲ್ಲಿ ಭಯದ ದವಾತಾವರಣ ಮೂಡಿತ್ತು. ಆದರೆ, ಯಾಸ್ಮಿನ್ ನವಾಜ್ ಕೊರೊನಾ ರೋಗದಿಂದ ಸಂರ್ಪೂಣವಾಗಿ ಮುಕ್ತರಾಗಿ ಬಂದಿದ್ದರಿಂದ ತಾಲೂಕಿನ ಜನರು ನಿಟ್ಟುಸಿರು ಬಿಡುವಂತಾಗಿದೆ.
ಹೆಚ್ಚುವರಿ ಎಸ್‍ಪಿ ಅಮರನಾಥ ರೆಡ್ಡಿ, ಅಥಣಿ ಡಿವೈಎಸ್‍ಪಿ ಎಸ್.ವಿ.ಗಿರೀಶ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣವರ, ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ, ಪುರಸಭೆ ಮುಖ್ಯಾಧಿಕಾರಿ ಎಸ್.ಎ.ಮಹಾಜನ, ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಎಸ್.ಬಾನೆ, ಕುಡಚಿ ಪಿಎಸ್‍ಐ ಶಿವರಾಜ ಧರಿಗೌಡ, ಕುಡಚಿ ವೈದ್ಯಾಧಿಕಾರಿ ಸತೀಶ ಕಲ್ಲಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.