ಬೆಳಗಾವಿ:ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಮಹಿಳೆಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿರುವ ಹೀನ ಕೃತ್ಯ ಬೆಳಗಾವಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಪ್ರೀತಿಸಿದ ಜೋಡಿ ಮನೆ ಬಿಟ್ಟು ಹೋಗಿದ್ದರಿಂದ ಯುವಕನ ತಾಯಿಯ ಮೇಲೆ ಯುವತಿಯ ಕುಟುಂಬಸ್ಥರು ದೌರ್ಜನ್ಯ ಮೆರೆದಿದ್ದಾರೆ. 42 ವರ್ಷ ವಯಸ್ಸಿನ ಮಹಿಳೆ ಹಲ್ಲೆಗೆ ಒಳಗಾದವರು. ಕಂಬಕ್ಕೆ ಕಟ್ಟಿ ಬೆತ್ತಲೆ ಮಾಡಿ ಕೀಚಕರು ಅಮಾನವೀಯವಾಗಿ ವರ್ತಿಸಿದ್ದಾರೆ.
ಯುವತಿಗೆ ಇಂದು ನಿಶ್ಚಯವಾಗಿದ್ದ ನಿಶ್ಚಿತಾರ್ಥ: ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ನಿನ್ನೆ ರಾತ್ರಿ ಮನೆ ಬಿಟ್ಟು ಈ ಪ್ರೇಮಿಗಳು ಓಡಿ ಹೋಗಿದ್ದಾರೆ. ಯವತಿಗೆ ಬೇರೆ ವರನನ್ನು ನೋಡಿದ್ದು, ಇಂದು ನಿಶ್ಚಿತಾರ್ಥ ಹಮ್ಮಿಕೊಳ್ಳಲಾಗಿತ್ತು. ಮದುವೆಯನ್ನು ಸಹ ಕುಟುಂಬಸ್ಥರು ನಿಗದಿ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಯುವತಿ ಕುಟುಂಬಸ್ಥರು ಯುವಕನ ಮನೆ ಮೇಲೆ ದಾಳಿ ಮಾಡಿ, ಮನೆಯನ್ನು ಸಂಪೂರ್ಣ ಧ್ವಂಸಗೊಳಿಸಿದ್ದಾರೆ.