ಬೆಳಗಾವಿ:ರಾಜ್ಯಾದ್ಯಂತ ಶಾಲೆಗಳ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳೇ ವಿದ್ಯಾರ್ಥಿಗಳನ್ನು ಸ್ವಾಗತಿಸುವ ದುಃಸ್ಥಿತಿ ಬೆಳಗಾವಿ ಜಿಲ್ಲೆಯಲ್ಲಿದೆ. ಹೌದು, ರಾಜ್ಯ ಸರ್ಕಾರದ ಸುತ್ತೋಲೆಯಂತೆ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳು ಸೋಮವಾರ ಆರಂಭವಾಗಿವೆ. ಬೆಳಗಾವಿಯಲ್ಲಿ ಮೊದಲ ದಿನ ಕೆಲವೇ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದು, ಶಿಕ್ಷಕರು ಶಾಲೆ ಆರಂಭದ ಹಿನ್ನೆಲೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 31ರಿಂದ ಎಲ್ಲ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಶಾಲೆಯತ್ತ ಮುಖ ಮಾಡಲಿದ್ದಾರೆ. ಮಕ್ಕಳು ಉತ್ಸಾಹದಿಂದ ಶಾಲೆ ಕಡೆ ಆಗಮಿಸಲು ಸಿದ್ಧರಾಗಿದ್ದರೆ, ಶಾಲೆಗಳ ಕಟ್ಟಡಗಳು ಅಪಾಯದ ಅಂಚಿಗೆ ತಲುಪಿವೆ. ಇದರಿಂದ ಮಕ್ಕಳು ಮತ್ತು ಪಾಲಕರ ಆತಂಕಕ್ಕೆ ಕಾರಣವಾಗಿದೆ.
2,204 ಕೊಠಡಿಗಳು ಶಿಥಿಲ:ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 417 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದರೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 1787 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಇಡೀ ಜಿಲ್ಲೆಯಲ್ಲಿ ಬರೊಬ್ಬರಿ 2,204 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಅಲ್ಲದೇ ಅನೇಕ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿ ಮತ್ತಿತರ ಸಮಸ್ಯೆಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಿವೆ. ಈ ಎಲ್ಲಾ ಗಂಭೀರ ಸಮಸ್ಯೆಗಳಿಂದ ಬೇಸತ್ತಿರುವ ಬಹಳಷ್ಟು ಪಾಲಕರು ತಮ್ಮ ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ದಾಖಲು ಮುಂದಾಗುತ್ತಿದ್ದಾರೆ. ಮಹಾತ್ಮಾ ಫುಲೆ ರಸ್ತೆಯ ಹೊಸುರ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ.4ರ ಎರಡು ಕೊಠಡಿಗಳು ಶಿಥಿಲಗೊಂಡಿದ್ದು, ಸೋರುವ ಸ್ಥಿತಿಗೆ ಬಂದು ತಲುಪಿವೆ. ಇನ್ನು ಗೋಡೆಗಳು ಬಿರುಕು ಬಿಟ್ಟಿವೆ. ಯಾವಾಗ ಬೇಕಾದರೂ ಬೀಳುವ ಸಾಧ್ಯತೆಯಿದೆ. 1ರಿಂದ 7ನೇ ತರಗತಿವರೆಗೆ ಇಲ್ಲಿ ಒಟ್ಟು 76 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಾರೆ. 1ರಿಂದ 3ನೇ ತರಗತಿ ಮಕ್ಕಳು ಒಂದು ಕೊಠಡಿ, 4ರಿಂದ 5ನೇ ತರಗತಿ ಮಕ್ಕಳು ಒಂದು ಕೊಠಡಿ ಮತ್ತು 6ರಿಂದ 7ನೇ ತರಗತಿ ಮಕ್ಕಳನ್ನು ಸೇರಿಸಿ ಒಂದೇ ಕೊಠಡಿಯಲ್ಲಿ ಕೂಡ್ರಿಸಿ ಪಾಠ ಮಾಡಲು ಇಲ್ಲಿನ ಶಿಕ್ಷಕರು ನಿರ್ಧರಿಸಿದ್ದಾರೆ.
ಹೊಸ ಕೊಠಡಿಗಳ ನಿರ್ಮಾಣಕ್ಕೆ ಅನುದಾನ:ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಸರ್ಕಾರಿ ಶಾಲೆಯ ಪ್ರಧಾನ ಗುರುಗಳಾದ ಜಿನ್ನಪ್ಪ ಪರಮಾಜ ಅವರು, ''ನಮ್ಮ ಶಾಲೆಯಲ್ಲಿ ಒಟ್ಟು ಐದು ಕೊಠಡಿಗಳಿದ್ದು, ಅದರಲ್ಲಿ ಎರಡು ಹಾಳಾಗಿವೆ. ಅವುಗಳನ್ನು ನೆಲಸಮ ಮಾಡಿ ಹೊಸ ಕೊಠಡಿಗಳ ನಿರ್ಮಾಣ ಮಾಡಲು ಅನುದಾನ ಮಂಜೂರಾಗಿದ್ದು, ಪಿಡಬ್ಲ್ಯೂಡಿ ಇಲಾಖೆಗೆ ಟೆಂಡರ್ ಆಗಿದೆ. ಎಪ್ರಿಲ್ನಲ್ಲಿ ಅಧಿಕಾರಿಗಳು ಶಾಲೆಗೆ ಬಂದು ಚುನಾವಣೆ ಮುಗಿದ ನಂತರ ಕಟ್ಟಲು ಆರಂಭಿಸುತ್ತೇವೆ ಎಂದಿದ್ದಾರೆ'' ಎಂದರು.