ಬೆಳಗಾವಿ: ಕೃಷಿ ಎಂದರೆ ಮೂಗು ಮುರಿಯುವವರ ಮಧ್ಯ ಇಲ್ಲೋಬ್ಬ ವಿದ್ಯಾವಂತ ಯುವತಿಯೋರ್ವರು 30 ಗುಂಟೆ ಜಮೀನಿನಲ್ಲಿ ಕೇವಲ ಆರು ತಿಂಗಳಲ್ಲೇ ಮೆಣಸಿನಕಾಯಿ ಬೆಳೆದು ಬರೊಬ್ಬರಿ 8 ಲಕ್ಷ ರೂ. ಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹೌದು ಬೆಳಗಾವಿ ತಾಲೂಕಿನ ಜಾಫರವಾಡಿ ಗ್ರಾಮದ ನಿಕಿತಾ ವೈಜು ಪಾಟೀಲ (26) ಎಂಬ ಯುವತಿಯೇ ಕೃಷಿಯಲ್ಲಿ ಸಾಧನೆ ಮಾಡುತ್ತಿರುವ ಯುವತಿ. ತಮ್ಮ 30 ಗುಂಟೆ ಜಮೀನಿನಲ್ಲಿ ನವಲ್ ಭಟಕಾ ತಳಿಯ ಮೆಣಸಿನಕಾಯಿ ಬೆಳೆದಿರುವ ನಿಕಿತಾ ಈವರೆಗೆ 2 ಲಕ್ಷ ರೂ. ಖರ್ಚು ಮಾಡಿ 8 ಲಕ್ಷ ರೂ. ಆದಾಯ ಗಳಿಸಿದ್ದಾರೆ.
ಈವರೆಗೆ 8 ಬಾರಿ ಮೆಣಸಿನಕಾಯಿ ಕಟಾವು ಮಾಡಲಾಗಿದ್ದು, ಪ್ರತಿ ಬಾರಿಯೂ 45 ಕ್ವಿಂಟಾಲ್ಗಳಂತೆ ಇಳುವರಿ ಬಂದಿದೆ. ಈಗ ಮತ್ತೆ ಕಟಾವಿಗೆ ಬಂದಿದ್ದು, ಇನ್ನು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ. ನಿಕಿತಾ ಬೆಳೆದಿರುವ ಮೆಣಸಿನಕಾಯಿಗೆ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಭಾರಿ ಡಿಮ್ಯಾಂಡ್ ಇದೆ. ಭಜ್ಜಿ, ಪಿಜ್ಜಾ, ಬರ್ಗರ್ ತಯಾರಿಸಲು ಕೂಡ ಈ ಮೆಣಸಿನಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಬೆಳಗಾವಿಯ ಭಾವುರಾವ್ ಕಾಕತಕ್ಕರ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿರುವ ನಿಕಿತಾ, ಬಳಿಕ ಭರತೇಶ ಕಾಲೇಜಿನಲ್ಲಿ ಲೆಕ್ಕ ಪರಿಶೋಧಕ ಹುದ್ದೆಗೆ ವ್ಯಾಸಂಗ ಮಾಡುತ್ತಿದ್ದರು. ಇದೇ ವೇಳೆ, ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ತಂದೆ ವೈಜು ಅಕಾಲಿಕ ನಿಧನ ನಿಕಿತಾ ಅವರನ್ನು ಚಿಂತೆಗೀಡಾಗುವಂತೆ ಮಾಡಿತು. ಇದರಿಂದ ಮುಂದೆ ಓದು ಮುಂದುವರಿಸಬೇಕಾ..? ಅಥವಾ ತಂದೆ ನಡೆಸುತ್ತಿದ್ದ ಕೃಷಿಯಲ್ಲಿ ತೊಡಗಬೇಕಾ ಎಂಬ ಪ್ರಶ್ನೆ ಎದುರಾದಾಗ ನಿಕಿತಾ ಕೃಷಿಯನ್ನೆ ಆಯ್ಕೆ ಮಾಡಿಕೊಂಡರು. ಚಿಕ್ಕಪ್ಪ ತಾನಾಜಿ, ಸಹೋದರ ಅಭಿಷೇಕ ಮಾರ್ಗದರ್ಶನದಲ್ಲಿ ಕೃಷಿಯಲ್ಲಿ ನಿಕಿತಾ ವಿನೂತನ ಪ್ರಯೋಗ ಕೈಗೊಂಡಿದ್ದು, ಆಧುನಿಕ ಕೃಷಿ ಪದ್ಧತಿ, ಹನಿ ನೀರಾವರಿ ಮೂಲಕ ಬೆಳೆ ಬೆಳೆಯುತ್ತಿದ್ದಾರೆ.