ಎಸ್ಪಿ ಭೀಮಾಶಂಕರ ಗುಳೇದ್ ಹೇಳಿಕೆ ಬೆಳಗಾವಿ: ಸೈನಿಕರಿಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದು ಓರ್ವ ಸೈನಿಕ ಮತ್ತೊಬ್ಬ ಸೈನಿಕನಿಗೆ ಬಂದೂಕಿನಿಂದ ಗುಂಡು ಹೊಡೆದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಗೋಕಾಕ ತಾಲ್ಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ನಿನ್ನೆ ನಡೆದಿದೆ.
ನಂಜುಂಡಿ ಲಕ್ಷ್ಮಣ ಬೂದಿಹಾಳ (32) ಗುಂಡು ಹಾರಿಸಿದ ಆರೋಪಿ. ಬಸವರಾಜ ಮೈಲಪ್ಪ ಬಂಬರಗಾ ಗಾಯಗೊಂಡ ಸೈನಿಕ. ಇಬ್ಬರೂ ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದು, ಇಬ್ಬರೂ ಕೂಡ ರಾಜನಕಟ್ಟೆ ಗ್ರಾಮದವರೇ ಆಗಿದ್ದಾರೆ. ಗಾಯಾಳು ಬಸಪ್ಪ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಗ್ಗೆ ಎಸ್ಪಿ ಮಾಹಿತಿ:ಈ ಬಗ್ಗೆಭೀಮಾಶಂಕರ ಗುಳೇದ್ ಮಾತನಾಡಿ,ಯೋಧ ಬಸವರಾಜ ಬಂಬರಗಾ ಅವರ ಮಾವ ಭರಮಪ್ಪ ಎಂಬವರಿಗೆ ಯೋಧ ನಂಜುಂಡಿ 1 ಲಕ್ಷ 70 ಸಾವಿರ ರೂ. ಸಾಲ ನೀಡಿದ್ದರು. ರಜೆ ಮುಗಿಸಿ ನಿನ್ನೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ, ನಂಜುಂಡಿ ನಿನ್ನೆ ಕುಡಿದ ನಶೆಯಲ್ಲಿ ಭರಮಪ್ಪರ ಮನೆಗೆ ತನ್ನ ಸ್ನೇಹಿತರಾದ ಮಹೇಶ ಮತ್ತು ವಿನಾಯಕ ಅವರೊಂದಿಗೆ ಹೋಗಿ ಮನೆ ಬಾಗಿಲು ಮುರಿದು, ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಗಲಾಟೆ ಮಾಡಿದ್ದರು. ಬಳಿಕ ಅಲ್ಲಿಂದ ಬಸವರಾಜ ಮನೆ ಹತ್ತಿರವೂ ಗಲಾಟೆ ಮಾಡಿದ್ದಾರೆ.
ಬಸವರಾಜ ಸಂಬಂಧಿಕರು ಹಿಡಿಯಲು ಹೋದಾಗ ಅಲ್ಲಿಂದ ನಂಜುಂಡಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ನಂತರ ಮನೆಯಲ್ಲಿದ್ದ ಡಬ್ಬಲ್ ಬ್ಯಾರೆಲ್ ಬಂದೂಕು ತೆಗೆದುಕೊಂಡು ಬಂದ ನಂಜುಂಡಿ, ನೇರವಾಗಿ ಬಸವರಾಜರ ಹೊಟ್ಟೆಗೆ ಹೊಡೆದಿದ್ದಾನೆ. ಅಂಕಲಗಿ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದು, ಎಫ್ಎಸ್‌ಎಲ್ ತಂಡವನ್ನೂ ಕರೆಸಿಕೊಂಡು ಸಾಕ್ಷಾಧಾರಗಳನ್ನು ಕಲೆ ಹಾಕಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಮುಂದಿನ ತನಿಖೆ ಕೈಗೊಂಡಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಯೋಧರ ನಡುವಿನ ಈ ಜಗಳದಿಂದ ರಾಜನಕಟ್ಟೆ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ನಿವೃತ್ತ ಎಸ್ಪಿ ಪುತ್ರನಿಂದ ಫೈರಿಂಗ್:ಕೊಡಗು ಜಿಲ್ಲೆಯಲ್ಲಿ ಕೆಲದಿನಗಳ ಹಿಂದೆ ನಡೆದ ಘಟನೆಯಲ್ಲಿ ನಿವೃತ್ತ ಎಸ್ಪಿ ಪುತ್ರ ವರ್ತಕನ ಮೇಲೆ ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ ವರ್ತಕ ಪ್ರಾಣಪಾಯದಿಂದ ಪಾರಾಗಿದ್ದರು. ನೆಲ್ಲಮಕ್ಜಡ ರಂಜನ್ ಚಿನ್ನಪ್ಪ ಎಂಬಾತ ಸಿದ್ದಾಪುರ ರಸ್ತೆಯ ವರ್ತಕ ಕೆ. ಬೋಪಣ್ಣನ ಮೇಲೆ ರಿವಾಲ್ವಾರ್ನಿಂದ ಎರಡು ಸುತ್ತು ಗುಂಡು ಹಾರಿಸಿದ್ದನು.
ಇದನ್ನೂ ಓದಿ:ಗೋಡೆ ಕೊರೆದು ಒಳ ನುಗ್ಗಿದ ಚಾಲಾಕಿಗಳು.. ₹25 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಖದೀಮರು!