ಚಿಕ್ಕೋಡಿ: ಮನೆಯಲ್ಲಿ ಬಾಲಕಿ ಒಬ್ಬಳೇ ಇರುವುದನ್ನು ಗಮನಿಸಿ ಆಕೆಯನ್ನು ಅಪಹರಿಸಿ ಅಟ್ಟಹಾಸ ಮೆರೆದಿರುವ ಆರೋಪ ಪ್ರಕರಣ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಗ್ರಾಮದ ಲಕ್ಷ್ಮಣ್ ಅಪ್ಪಾಸಾಬ್ ದುಬಾರಿ (22) ಎಂಬ ಯುವಕನ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಈತನ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಪಹರಣಕ್ಕೆ ಸಹಕರಿಸಿದ ಶೇಖರ್ ಬಾಬು ಹುಲ್ಯಾಳ ಹಾಗೂ ಬಾಬು ರಾಮು ಹುಲ್ಯಾಳ ಎಂಬುವರು ಪರಾರಿಯಾಗಿದ್ದಾರೆ.
ಘಟನೆ ವಿವರ :
ಜೂನ್ 15ರಂದು ಮನೆಯವರೆಲ್ಲ ಕೂಲಿ ಕೆಲಸಕ್ಕೆ ಹೋಗಿದ್ದರು. ಬಾಲಕಿ ಕಾಲೇಜ್ನಿಂದ ಬಂದು ಮನೆಯಲ್ಲಿ ಒಬ್ಬಳೇ ಇದ್ದಳು. ಶೇಖರ್ ಹುಲ್ಯಾಳ ಮತ್ತು ಬಾಬು ಹುಲ್ಯಾಳ ಸಹಕಾರದೊಂದಿಗೆ ಆರೋಪಿ ಲಕ್ಷ್ಮಣ್ ಅಪ್ರಾಪ್ತೆಯನ್ನು ಅಪಹರಿಸಿದ್ದ ಎನ್ನಲಾಗ್ತಿದೆ. ಅಲ್ಲದೆ ಬೆಳಗಾವಿ ನಗರದಲ್ಲಿರುವ ಸ್ನೇಹಿತನ ಮನೆಗೆ ಕರೆದೊಯ್ದು ತಮ್ಮ ಮಗಳ ಮೇಲೆ ಲಕ್ಷ್ಮಣ್ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ತಂದೆ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಡಿವೈಎಸ್ಪಿ ರಾಮಗೌಡ ಬಸರಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅಥಣಿ ತಾಲೂಕಿನ ಘಟನಟ್ಟಿ ಕ್ರಾಸ್ ಬಳಿ ಆರೋಪಿ ಲಕ್ಷ್ಮಣ್ ಅಪ್ಪಾಸಾಬ್ ದುಬಾರಿಯನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳಿಸಲಾಗಿದೆ.