ಬೆಳಗಾವಿ :ಮಾನಸಿಕ ಅಸ್ವಸ್ಥನೋರ್ವನನ್ನು ಕುಟುಂಬ ಸದಸ್ಯರೇ ಕಳೆದ 10 ವರ್ಷಗಳಿಂದ ಪಾಳು ಬಿದ್ದ ಮನೆಯಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹಣ್ಣಿಕೇರಿ ಗ್ರಾಮದ ವಿಠ್ಠಲ್ ಬಳಗಣ್ಣವರ ಎಂಬಾತನೇ ಕತ್ತಲೆ ಕೋಣೆಯಲ್ಲಿ ಬಂಧಿಯಾಗಿರುವ ವ್ಯಕ್ತಿ. ಮಾನಸಿಕ ಅಸ್ವಸ್ಥನೆಂಬ ಕಾರಣಕ್ಕೆ ಈತನನ್ನು ಸರಪಳಿ ಹಾಕಿ ಪಾಳು ಮನೆಯಲ್ಲೇ ಕುಟುಂಬ ಸದಸ್ಯರು ಕೂಡಿ ಹಾಕಿದ್ದಾರೆ. ಮೈಗೆ ಬಟ್ಟೆಯಿಲ್ಲದೇ ಕತ್ತಲೆ ಕೋಣೆಯಲ್ಲಿ ಕಳೆದ 10 ವರ್ಷಗಳಿಂದ ಈತ ಜೀವನ ನರಕಯಾತನೆಯಾಗಿದೆ.
10 ವರ್ಷಗಳಿಂದ ಪಾಳು ಮನೆಯಲ್ಲೇ ಜೀವನ ಸಾಗಿಸುತ್ತಿರುವ ಮಾನಸಿಕ ಅಸ್ವಸ್ಥ.. ಕೈ-ಕಾಲಿಗೆ ಬೇಡಿ ಹಾಕಿದ್ದರೂ ಕಷ್ಟಪಡುತ್ತ ಈತ ಆಹಾರ ಸೇವಿಸುತ್ತಿದ್ದಾನೆ. ಬೇಡಿ ತೆಗೆದ್ರೆ ಸ್ಥಳೀಯರಿಗೆ ಕಲ್ಲಿನಿಂದ ಹೊಡೆಯುತ್ತಾನೆಂಬ ಭಯ ಕುಟುಂಬಸ್ಥರನ್ನು ಕಾಡುತ್ತಿದೆ. ಬೇರೆಯವರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಮನೆಯಲ್ಲಿ ಕೂಡಿಹಾಕಿದ್ದೇವೆ ಎಂದು ಆತನ ತಾಯಿ ಭೀಮವ್ವ ಕಣ್ಣೀರು ಹಾಕುತ್ತಾರೆ.
10 ವರ್ಷಗಳ ಹಿಂದೆ ಬೆಳಗಾವಿಯ ಹೋಟೆಲ್‌ವೊಂದರಲ್ಲಿ ವಿಠ್ಠಲ ಕೆಲಸ ಮಾಡುತ್ತಿದ್ದ. ಊರಿಗೆ ಮರಳಿದ ನಂತರ ಮಾನಸಿಕ ಅಸ್ವಸ್ಥನಾಗಿದ್ದಾನೆ. ಆಸ್ಪತ್ರೆಗೆ ಎಷ್ಟೇ ವೆಚ್ಚ ಮಾಡಿದ್ರೂ ಗುಣಮುಖನಾಗಲಿಲ್ಲ. ಬಳಿಕ ಕೆಲ ದಿನಗಳ ಕಾಲ ಈತ ಗ್ರಾಮಸ್ಥರ ಮೇಲೆ ಕಲ್ಲೆಸೆಯುತ್ತಿದ್ದ. ಈ ಕಾರಣಕ್ಕೆ ಮನೆಯಲ್ಲಿ ಕೂಡಿ ಹಾಕಿರುವುದಾಗಿ ಕುಟುಂಬಸ್ಥರು ಹೇಳುತ್ತಿದ್ದಾರೆ.