ಬೆಳಗಾವಿ:ಮರಾಠ ಸಮುದಾಯದ ಅಭಿವೃದ್ಧಿಗೆ ಸರ್ಕಾರದ50 ಕೋಟಿ ರೂಪಾಯಿ ಹಣ ಸಾಕಾಗುವುದಿಲ್ಲ. ಹೆಚ್ಚಿನ ಹಣ ನೀಡಬೇಕು. ಸಮಾಜದ ಸಣ್ಣ-ಸಣ್ಣ ಗುಂಪುಗಳು ವಿಭಜನೆಯಾಗಿವೆ. ಎಲ್ಲರನ್ನು ಒಟ್ಟುಗೂಡಿಸಲು ನಾವು ಪ್ರಯತ್ನವನ್ನು ಮಾಡುತ್ತಿದ್ದೇವೆ. ಪಕ್ಷ, ಜಾತಿ, ಧರ್ಮ, ಭಾಷೆಯ ಯಾವುದೇ ಭೇದ ಇಲ್ಲದೇ ಹೋರಾಟ ಮಾಡಲಾಗುತ್ತದೆ ಎಂದು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದರು.
ಬೆಳಗಾವಿಯಲ್ಲಿ ಮರಾಠ ಸಮುದಾಯದ ಶಕ್ತಿ ಪ್ರದರ್ಶನ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಂಜಲಿ ನಿಂಬಾಳ್ಕರ್, ಇಂದು ನಡೆಯುತ್ತಿರುವ ಗುರುವಂದನೆ ಕಾರ್ಯಕ್ರಮವನ್ನು ಸಕಲ ಮರಾಠ ಸಮಾಜದಿಂದ ಆಯೋಜನೆ ಮಾಡಲಾಗಿದೆ. ಸಮಾಜದ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಏನು ಒತ್ತಾಯ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ. ಶಿವಾಜಿ ಮಹಾರಾಜರು ಎಲ್ಲಾ ಜಾತಿಗಳನ್ನು ಒಟ್ಟುಗೂಡಿಸಿ ಹಿಂದ್ವಿಸ್ವರಾಜ್ ಸ್ಥಾಪನೆಗೆ ಹೋರಾಟ ಮಾಡಿದ್ದರು. ಆ ನಿಟ್ಟಿನಲ್ಲಿ ಸಮಾಜದ ಎಲ್ಲರೂ ಸಮಾಜದ ಏಳಿಗೆಗೆ ಹೋರಾಟ ಮಾಡುವುದರ ಜೊತೆಗೆ ಒಂದುಗೂಡಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ:ಜಮೀರ್ ಅಂತವರು ನಮ್ಮಲ್ಲೂ ಇದ್ದಾರೆ: ರಿಷಿ ಕುಮಾರ್ ಸ್ವಾಮಿ
ಮರಾಠ ಸಮಾಜಕ್ಕೆ 2A ಮೀಸಲಾತಿ ನೀಡಬೇಕು ಎಂಬುದು ನಮ್ಮ ಬೇಡಿಕೆ ಇದೆ. ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆ ನಿಟ್ಟಿನಲ್ಲಿ ಹೋರಾಟ ಮುಂದುವರೆಯಲಿದೆ. ಮರಾಠ ಸಮುದಾಯಕ್ಕೆ ಸಚಿವ ಸ್ಥಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸ್ಥಾನದ ಆಗ್ರಹವನ್ನು ನಾನು ಮಾಡಲು ಬಂದಿಲ್ಲ. ಸಮುದಾಯಕ್ಕೆ ಶೈಕ್ಷಣಿಕ, ಆರ್ಥಿಕ ಪ್ರಗತಿಯಾಗಬೇಕು ಎನ್ನುವುದು ನಮ್ಮ ಬೇಡಿಕೆ. 50ಕೋಟಿ ಹಣ ಸಾಕಾಗಲ್ಲ, ಹೆಚ್ಚಿನ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಮರಾಠಿ ಸಮುದಾಯದ ಶಕ್ತಿ ಪ್ರದರ್ಶನ:ಚುನಾವಣೆ ಹತ್ತಿರದಲ್ಲೇ ಇರುವಾಗ ಕುಂದಾನಗರಿಯಲ್ಲಿ ಮರಾಠ ಸಮುದಾಯದ ಮುಖಂಡರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬೆಳಗಾವಿ ಕಪಿಲೇಶ್ವರ ಮಂದಿರದಿಂದ ವಡಗಾವಿವರೆಗೆ ವಿವಿಧ ಕಲಾತಂಡಗಳು, ವಾದ್ಯಮೇಳಗಳೊಂದಿಗೆ ಬೃಹತ್ ಯೋಭಾಯಾತ್ರೆಯ ಮೆರವಣಿಗೆ ನಡೆಯಿತು. ಇದಕ್ಕೂ ಮುಂಚೆ ಶಾಹಾಪುರದಲ್ಲಿನ ಶಿವಾಜಿ ಗಾರ್ಡನ್ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಹಾಲಿನ ಅಭಿಷೇಕ, ಪೂಜೆ ಸಲ್ಲಿಸಲಾಯಿತು. ಈ ವೇಳೆ ಮರಾಠ ಸಮುದಾಯದ ಜಗದ್ಗುರು ಶ್ರೀ ವೇದಾಂತ ಮಂಜುನಾಥ ಭಾರತಿ ಸ್ವಾಮೀಜಿ, ಶಾಸಕರಾದ ಅನಿಲ್ ಬೆನಕೆ, ಶ್ರೀಮಂತ ಪಾಟೀಲ್, ಅಂಜಲಿ ನಿಂಬಾಳ್ಕರ್, ಕಿರಣ್ ಜಾಧವ ಸೇರಿದಂತೆ ಮರಾಠ ಸಮುದಾಯದ ಮುಖಂಡರು ಭಾಗವಹಿಸಿದ್ದರು.