ಅಥಣಿ(ಬೆಳಗಾವಿ):ತಾಲೂಕಿನ ಸತ್ತಿ ಗ್ರಾಮದ ಹೊರವಲಯದ ಕೋಳಿ ಗದ್ದೆಯಲ್ಲಿ ಪರಸ್ತ್ರೀ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಆಕೆಯ ಪತಿಯನ್ನೇ ಕೊಲೆ ಮಾಡಿ ಶವವನ್ನು ಬಾವಿಗೆ ಬಿಸಾಕಿದ ಘಟನೆ ನಡೆದಿದೆ.
ಮಹಾರಾಷ್ಟ್ರದ ಜತ್ತ ತಾಲೂಕಿನ ಧರೆಬಡಚಿ ಗ್ರಾಮದ ಗಂಗಯ್ಯ ಸಿದ್ದಯ್ಯ ಸಾಮಿ(32) ಕೊಲೆಯಾದ ವ್ಯಕ್ತಿ. ಮೇ 5 ರಂದು ಅಥಣಿ ಪೋಲಿಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗುತಿದಂತೆ ಕಾರ್ಯ ಪ್ರಬುದ್ಧರಾಗಿ ಅಥಣಿ ಪೊಲೀಸರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿ ಓರ್ವ ಆರೋಪಿಯನ್ನು ಹಿಡಿದು ಇನ್ನಿಬ್ಬರಿಗೆ ಬಲೆ ಬೀಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ ಲಕ್ಷ್ಮಣ್ ನಿಂಬರಗಿ ಕಳೆದ ಮೇ 5ರಂದು ಶೋಭಾ ಸ್ವಾಮಿ ಎಂಬುವರು ತನ್ನ ಗಂಡ ಗಂಗಯ್ಯ ಸಿದ್ದಯ್ಯ ಸ್ವಾಮಿ ಎಪ್ರಿಲ್ 30ರ ಸಂಜೆಯಿಂದ ಕಾಣೆಯಾಗಿದ್ದಾರೆ ಎಂದು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಡಿವೈಎಸ್ಪಿ ಎಸ್ ವಿ ಗಿರೀಶ್ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಪ್ರಾರಂಭಿಸುತ್ತಿದ್ದಂತೆ ಓರ್ವ ಪ್ರಮುಖ ಆರೋಪಿ ಮಹಾಂತೇಶ ಗಾಯಕವಾಡನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಉಳಿದಂತೆ ಕೊಲೆ ಆರೋಪಿಗಳಾದ ಅಥಣಿ ತಾಲೂಕಿನ ಸತ್ತಿ ಗ್ರಾಮದ ಮಹಾಂತೇಶ ಪುಂಡಲೀಕ ಗಾಯಕವಾಡ, ಅಥಣಿ ಪಟ್ಟಣದ ರಾಹುಲ ಸಂಜಯ ಶಿಂಧೆ ಹಾಗೂ ರಡೇರಹಟ್ಟಿ ಗ್ರಾಮದ ವಿಜಯ ಜ್ಞಾನೇಶ್ವರ ಗಾಡವಾಲೆಗಾಗಿ ಹುಡುಕಾಟ ನಡೆಯುತ್ತಿದೆ.
ಘಟನೆ ವಿವರ:
ಗಂಗಯ್ಯ ಸ್ವಾಮಿ ತನ್ನ ಪತ್ನಿ, ಇಬ್ಬರು ಮಕ್ಕಳೊಂದಿಗೆ ಕೆಲ ವರ್ಷಗಳಿಂದ ಅಥಣಿ ಪಟ್ಟಣದ ಗವಿಸಿದ್ಧ ಮಡ್ಡಿಯಲ್ಲಿ ವಾಸವಿದ್ದರು. ಗಂಗಯ್ಯನ ಪತ್ನಿ ಜೊತೆ ಮಹಾಂತೇಶ ಗಾಯಕವಾಡ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ವಿಷಯ ತಿಳಿದ ಗಂಗಯ್ಯ ಸಂಬಂಧ ನಿಲ್ಲಿಸುವಂತೆ ಎರಡು ತಿಂಗಳ ಹಿಂದೆ ಮಹಾಂತೇಶ ಗಾಯಕವಾಡನಿಗೆ ತಾಕೀತು ಮಾಡಿದ್ದನು. ಇದರಿಂದ ಕೆರಳಿದ ಮಹಾಂತೇಶ, ಸ್ನೇಹಿತರಾದ ರಾಹುಲ್, ವಿಜಯ ಜೊತೆ ಸೇರಿ ರಾತ್ರಿ ವೇಳೆ ಗಂಗಯ್ಯನನ್ನು ಸಂಕೋನಟ್ಟಿ ಗ್ರಾಮದ ಸರಹದ್ದಿನಲ್ಲಿ ಕೇಬಲ್ ವೈರ್‌ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದ. ಬಳಿಕ ಸತ್ತಿ ಗ್ರಾಮದ ಸಾಬು ಕೋಳಿ ಗದ್ದೆಯಲ್ಲಿರುವ ಬಾವಿಯಲ್ಲಿ ಶವ ಬಿಸಾಕಿದ್ದಾರೆ. ಸತ್ತಿ ಗ್ರಾಮದಲ್ಲಿ ಹಾಳು ಬಾವಿಯಿಂದ ಶವ ಹೊರತೆಗೆದು ಅಥಣಿ ಪೋಲಿಸರು ತನಿಖೆ ಪ್ರಾರಂಭಿಸಿದ್ದಾರೆ. ಇವತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.