ಬೆಳಗಾವಿ: ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ಹಲ್ಲೆ, ದೌರ್ಜನ್ಯ ಪ್ರಕರಣಗಳು ಸಾಮಾನ್ಯವಾಗಿ ಬಿಟ್ಟಿವೆ. ಅಂಗನವಾಡಿ ಮಕ್ಕಳು ಹೂ ಕಿತ್ತುಕೊಂಡರು ಎಂಬ ಒಂದೇ ಕಾರಣಕ್ಕೆ ವ್ಯಕ್ತಿಯೊಬ್ಬರು ಅಂಗನವಾಡಿ ಸಹಾಯಕಿಯ ಮೂಗನ್ನೇ ಕತ್ತರಿಸಿರುವ ಅಮಾನವೀಯ ಘಟನೆಯೊಂದು ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ನಡೆದಿದೆ.
ಸುಗಂಧಾ ಮೋರೆ (50) ಹಲ್ಲೆಗೊಳಗಾದ ಅಂಗನವಾಡಿ ಸಹಾಯಕಿ. ಮನೆ ಮಾಲೀಕ ಕಲ್ಯಾಣಿ ಮೋರೆ ಮೂಗು ಕತ್ತರಿಸಿರುವ ಆರೋಪಿ. ಗಂಭೀರವಾಗಿ ಗಾಯಗೊಂಡಿರುವ ಸುಂಗಧಾ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಗನವಾಡಿ ಮಕ್ಕಳು ಪಕ್ಕದ ಮನೆಯ ಮುಂದೆ ಬೆಳೆದಿದ್ದ ಹೂ ಕಿತ್ತರು ಎಂಬ ಕ್ಷುಲ್ಲಕ ಕಾರಣಕ್ಕೆ ಅಂಗನವಾಡಿ ಸಹಾಯಕಿಗೆ ಅವಾಚ್ಯವಾಗಿ ನಿಂದಿಸಿ, ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜ.1 ರಂದು ಅಂಗನವಾಡಿ ಕೇಂದ್ರದ ಮುಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೂಗು ಕತ್ತರಿಸಿರುವ ಹಿನ್ನೆಲೆ ಶ್ವಾಸಕೋಶದಲ್ಲಿ ರಕ್ತ ಹೋಗಿ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಅಂಗನವಾಡಿ ಮಕ್ಕಳು ಆಟವಾಡುತ್ತಾ ಅಂಗನವಾಡಿ ಪಕ್ಕದಲ್ಲೇ ಇರುವ ಮನೆಯ ಆವರಣದಲ್ಲಿ ಬೆಳೆಯಲಾಗಿದ್ದ ಮಲ್ಲಿಗೆ ಹೂ ಕಿತ್ತಿದ್ದರು. ಇದರಿಂದ ಸಿಟ್ಟಿಗೆದ್ದು ಅಂಗನವಾಡಿ ಸಹಾಯಕಿ ಮೇಲೆ ಮನೆ ಮಾಲೀಕ ಈ ರೀತಿ ಅಟ್ಟಹಾಸ ಮೆರೆದಿದ್ದಾನೆ. ಮಕ್ಕಳು ಮಾಡಿದ ತಪ್ಪಿಗೆ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ :ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ : ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಆರೋಪ
ಇನ್ನು ಸುಗಂಧಾ ಅವರ ಪತಿ ವಿಶೇಷಚೇತನರಾಗಿದ್ದು, ಅಂಗನವಾಡಿ ಸಹಾಯಕಿಯಾಗಿ ಜೀವನದ ಬಂಡಿ ಸಾಗಿಸುತ್ತಿದ್ದರು. ಮಾರಣಾಂತಿಕ ಹಲ್ಲೆಯಿಂದ ಸುಗಂಧಾ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈವರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ ಎಂದು ಆರೋಪಿಸಲಾಗಿದೆ.
ನಿಯಮಾನುಸಾರ ಕ್ರಮ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎ.ಎಂ.ಬಸವರಾಜು ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ಬಸುರ್ತೆ ಗ್ರಾಮದ ಅಂಗನವಾಡಿ ಸಹಾಯಕಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ನಿಯಮಾನುಸಾರ ಕ್ರಮ ತೆಗೆದುಕೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುತ್ತೇನೆ. ಅದೇ ರೀತಿ ಸಂತ್ರಸ್ತ ಮಹಿಳೆಯ ವೈದ್ಯಕೀಯ ವೆಚ್ಚ ಭರಿಸುವ ಬಗ್ಗೆ ನಮ್ಮ ಇಲಾಖೆಗೂ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಅವರನ್ನು ಈಟಿವಿ ಭಾರತಸಂಪರ್ಕಿಸಿದಾಗ, ಹಲ್ಲೆ ಕೇಸ್ಗೆ ಸಂಬಂಧಿಸಿದಂತೆ ಆರೋಪಿ ಪತ್ತೆಗೆ ಕಾಕತಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಶೀಘ್ರವೇ ಬಂಧಿಸಲಿದ್ದಾರೆ ಎಂದಿದ್ದಾರೆ.
ಆರೋಪಿ ಬಂಧನಕ್ಕೆ ಸಿಐಟಿಯು ಆಗ್ರಹ: ಪ್ರಕರಣ ಖಂಡಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು)ದ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಸುಗಂಧಾ ಗಜಾನನ ಮೋರೆ ಎಂಬ ಅಂಗನವಾಡಿ ಸಹಾಯಕಿ ಮೇಲೆ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಆತನನ್ನು ಈವರೆಗೂ ಬಂಧಿಸದೇ ಇರುವುದು ವಿಷಾದನೀಯ. ಜಿಲ್ಲೆಯಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಂಘದ ಗೌರವ ಅಧ್ಯಕ್ಷ ಜಿ.ಎಂ.ಜೈನೆಖಾನ್, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಯಭೀತವಾಗಿ ಕೆಲಸ ಮಾಡುವ ಸ್ಥಿತಿಯಿದೆ. ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ಹಲ್ಲೆ ಆಗುತ್ತಿವೆ. ಬೇಟಿ ಬಚಾವೋ ಬೇಟಿ ಪಡಾವೋ, ಸುಕನ್ಯಾ ಸಮೃದ್ಧಿ ಯೋಜನೆಗಳು ಇವೆ. ಆದರೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲದಾಗಿದೆ. ಹಲ್ಲೆಗೊಳಾದ ಅಂಗನವಾಡಿ ಸಹಾಯಕಿ ಅವರ ಕುಟುಂಬಕ್ಕೆ ಆಧಾರವಾಗಿದ್ದಳು. ಹಾಗಾಗಿ, ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಪರಾರಿಯಾಗಿರುವ ಆರೋಪಿಯನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷೆ ಮಂದಾ ನೇವಗಿ ಮಾತನಾಡಿ, ಮಾರಣಾಂತಿಕ ಹಲ್ಲೆ ಆಗಿರುವುದು ನಿಜಕ್ಕೂ ದುರಂತ. ಕೂಡಲೇ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮೀರಾ ಮೋರೆ, ಸುಜಾತಾ ಕುಲಕರ್ಣಿ, ವಂದನಾ ಹೊನಗೇಕರ್, ರೇಣುಕಾ ಖಾಂಡೇಕರ್ ಸೇರಿ ಮತ್ತಿತರರು ಇದ್ದರು.